ಮನ್ ಕಿ ಬಾತ್: ಪ್ರಧಾನ ಸೇವಕನಾಗಿ ದೇಶಕ್ಕೆ ಸೇವೆ ಸಲ್ಲಿಸುವುದೇ ನನ್ನ ಗುರಿ- ಪ್ರಧಾನಿ  ಮೋದಿ

ಅಧಿಕಾರದಲ್ಲಿರಲು ಅಲ್ಲ, ಪ್ರಧಾನ ಸೇವಕನಾಗಿ ದೇಶಕ್ಕೆ ಸೇವೆ ಸಲ್ಲಿಸುವುದೇ ನನ್ನ ಗುರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಅಧಿಕಾರದಲ್ಲಿರಲು ಅಲ್ಲ, ಪ್ರಧಾನ ಸೇವಕನಾಗಿ ದೇಶಕ್ಕೆ ಸೇವೆ ಸಲ್ಲಿಸುವುದೇ ನನ್ನ ಗುರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್​ನ 83ನೇ ಆವೃತ್ತಿಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಹುತಾತ್ಮ ವೀರ ಯೋಧರನ್ನು ಸ್ಮರಿಸಿ, ನಮನ ಸಲ್ಲಿಸಿದರು.

ಇನ್ನೆರಡು ದಿನಗಳಲ್ಲಿ ಡಿಸೆಂಬರ್ ತಿಂಗಳು ಆರಂಭವಾಗಲಿದೆ. ಹೊಸ ವರ್ಷಕ್ಕೆ ನಾವು ಹೊಸ ಚಿಂತನೆಯನ್ನು ಆರಂಭಿಸುತ್ತೇವೆ. ಡಿಸೆಂಬರ್‌ನಲ್ಲಿ ದೇಶವು ನೌಕಾಪಡೆಯ ದಿನ ಮತ್ತು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸುತ್ತದೆ. ಡಿಸೆಂಬರ್ 16 ರಂದು ದೇಶವು 1971 ರ ಯುದ್ಧದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಎಲ್ಲಾ ಸಂದರ್ಭಗಳಲ್ಲಿ, ನಾನು ದೇಶದ ಭದ್ರತಾ ಪಡೆಗಳನ್ನು ನೆನಪಿಸಿಕೊಳ್ಳುತ್ತೇನೆ, ನಮ್ಮ ವೀರರನ್ನು ನೆನಪಿಸಿಕೊಳ್ಳುತ್ತೇನೆ. ಅವರನ್ನು ಹೆತ್ತ ತಾಯಂದರಿಗೆ ಪ್ರಣಾಮಗಳನ್ನು ಸಲ್ಲಿಸುತ್ತೇನೆಂದು ಹೇಳಿದ್ದಾರೆ.

ಬಳಿಕ ಅಮೃತ ಮಹೋತ್ಸವ ಕುರಿತು ಮಾತನಾಡಿ, ಅಮೃತ ಮಹೋತ್ಸವವು ಕಲಿಯುವುದರ ಜತೆಗೆ ದೇಶಕ್ಕಾಗಿ ಏನಾದರೂ ಮಾಡುವುದನ್ನೂ ಪ್ರೇರೇಪಿಸುತ್ತದೆ. ಭಾರತದ ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಪಂಚಾಯಿತಿ ಇಂದ ಪಾರ್ಲಿಮೆಂಟ್ ತನಕ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒನ್​ಜಿಸಿಯಿಂದ ತನ್ನ ವಿದ್ಯಾರ್ಥಿಗಳಿಗೆ ಸ್ಟಡಿ ಟೂರ್ ಏರ್ಪಡಿಸಲಾಗಿದೆ. ಈ ಮೂಲಕ ಒನ್​ಜಿಸಿ ಕೂಡ ಸಾರ್ಥಕ ಅಮೃತ ಮಹೋತ್ಸವ ಆಚರಿಸುತ್ತಿದೆ.

ಅಜಾದಿ ಕಿ ಕಹಾನಿ ಬಚ್ಚೋಂ ಕಿ ಜುಬಾನಿ' ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮಕ್ಕಳು ಸ್ವಾತಂತ್ರ್ಯ ಸಂಗ್ರಾಮದ ವಿವಿಧ ಕಥೆಗಳನ್ನು ಹೇಳುತ್ತಿದ್ದಾರೆ. ಇದರಲ್ಲಿ ಗಮನಿಸಬೇಕಾ ಅಂಶವೆಂದರೆ ಭಾರತ ಮಾತ್ರವಲ್ಲ ನೇಪಾಳ, ತಾಂಜೇನಿಯಾ, ನ್ಯುಜಿಲೆಂಡ್, ಫಿಜಿಯಲ್ಲಿನ ಮಕ್ಕಳು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಸ್ಟಾರ್ಟ್‌ಅಪ್‌ ಕುರಿತು ಮಾತನಾಡಿ, ದೇಶದ ವಿವಿಧ ಕಡೆಗಳಿಂದ ಸಲಹೆಗಳು ಬಂದಿವೆ. ಹಲವಾರು ಯುಕವಕರು ಸ್ಟಾರ್ಟ್ ಅಪ್ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇಂದು, ಭಾರತದಲ್ಲಿ 70 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು 1 ಶತಕೋಟಿಗಿಂತ ಹೆಚ್ಚಿನ ಮೌಲ್ಯ ದಾಟಿವೆ. ತಮ್ಮ ಸ್ಟಾರ್ಟಪ್‌ಗಳ ಮೂಲಕ ಅನೇಕ ಭಾರತೀಯರು ಜಾಗತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತಿದ್ದಾರೆಂದಿದ್ದಾರೆ.

ಸಬ್​ ಕಾ ಸಾಥ್ ಸಬ್ ಕಾ ವಿಕಾಸ್​’ಗೆ ಉದಾಹರಣೆಯನ್ನು ನೀಡಿದ ಅವರು, ‘‘ಜಲೌನ್‌ನಲ್ಲಿ ನೂನ್ ನದಿ ಎಂಬ ನದಿ ಇತ್ತು. ಕ್ರಮೇಣ, ನದಿಯು ಅಳಿವಿನ ಅಂಚಿಗೆ ಬಂದಿತ್ತು. ಇದು ಈ ಪ್ರದೇಶದ ರೈತರಿಗೆ ಬಿಕ್ಕಟ್ಟನ್ನು ಹೆಚ್ಚಿಸಿತು. ಜಲೌನ್‌ನ ಜನರು ಈ ವರ್ಷ ಸಮಿತಿಯನ್ನು ರಚಿಸಿದರು ಮತ್ತು ನದಿಯನ್ನು ಪುನರುಜ್ಜೀವನಗೊಳಿಸಿದರು. ಇದು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್​ಗೆ ಉದಾಹರಣೆಯಾಗಿದೆ’’ ಎಂದು ಹೇಳಿದ್ದಾರೆ.

ಕೊರೋನಾ ಇನ್ನೂ ಹೋಗಿಲ್ಲ ಎಂಬುದನ್ನು ಎಂದಿಗೂ ಮರೆಯಬೇಡಿ. ಮುನ್ನೆಚ್ಚರಿಕೆ ವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’’ ಎಂದು ಪ್ರಧಾನಿ ನುಡಿದಿದ್ದಾರೆ.

ದೇಶಕ್ಕೆ ಸೇವೆ ಸಲ್ಲಿಸುವುದೇ ನನ್ನ ಗುರಿ
ಪ್ರಧಾನ ಸೇವಕನಾಗಿ ಜನರಿಗೆ ಸೇವೆ ಸಲ್ಲಿರುವುದು ನನ್ನ ಆದ್ಯ ಕರ್ತವ್ಯವಾಗಿದೆ. ಯೋಜನೆಗಳ ಮೂಲಕ ಸರ್ಕಾರ ಜನರ ಜೀವನವನ್ನು ಬದಲಾಯಿಸಿದೆ. ಇದು ನನಗೆ ತೃಪ್ತಿಯನ್ನು ನೀಡುತ್ತದೆ. ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಅಧಿಕಾರದಲ್ಲಿಯೇ ಇರಲು ನಾನು ಬಯಸುವುದಿಲ್ಲ. ಜನರಿಗೆ ಸೇವೆ ಸಲ್ಲಿಸುವುದಷ್ಟೇ ನನ್ನ ಗುರಿಯಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com