ಭಾರತದ ಬಹುತೇಕ ಮಂದಿ ಓಮಿಕ್ರಾನ್ ಸೋಂಕಿನ ವಿರುದ್ಧ ಸುರಕ್ಷಿತ: ಖ್ಯಾತ ವೈರಾಲಜಿಸ್ಟ್ ಶಾಹಿದ್ ಜಮೀಲ್
ಓಮಿಕ್ರಾನ್ ಇರಲಿ ಅಥವಾ ಇನ್ಯಾವುದೇ ಕೊರೋನಾ ಸೋಂಕಿನ ರೂಪಾಂತರಿ ತಳಿಯಾಗಿರಲಿ ಅದರ ವಿರುದ್ಧ ಬಹುತೇಕ ಭಾರತೀಯ ಮಂದಿ ಸುರಕ್ಷಿತರಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ಖ್ಯಾತ ವೈರಾಲಜಿಸ್ಟ್ ಶಾಹಿದ್ ಜಮೀಲ್ ಅಭಿಪ್ರಾಯಪಟ್ಟಿದ್ದಾರೆ.
Published: 30th November 2021 04:05 PM | Last Updated: 30th November 2021 04:29 PM | A+A A-

ಕೊರೋನಾ ವೈರಸ್ (ಸಂಗ್ರಹ ಚಿತ್ರ)
ನವದೆಹಲಿ: ಓಮಿಕ್ರಾನ್ ಇರಲಿ ಅಥವಾ ಇನ್ಯಾವುದೇ ಕೊರೋನಾ ಸೋಂಕಿನ ರೂಪಾಂತರಿ ತಳಿಯಾಗಿರಲಿ ಅದರ ವಿರುದ್ಧ ಬಹುತೇಕ ಭಾರತೀಯ ಮಂದಿ ಸುರಕ್ಷಿತರಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ಖ್ಯಾತ ವೈರಾಲಜಿಸ್ಟ್ ಶಾಹಿದ್ ಜಮೀಲ್ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಸಾರ್ಸ್-ಸಿಒವಿ-2 ಜಿನೋಮಿಕ್ಸ್ ಒಕ್ಕೂಟ (ಐಎನ್ಎಎಸ್ಎಸಿಒಜಿ) ದ ಮಾಜಿ ಮುಖ್ಯಸ್ಥರೂ ಆಗಿರುವ ಶಾಹಿದ್ ಜಮೀಲ್, ಕೊರೋನಾದ ರೂಪಾಂತರಿ ಸೋಂಕುಗಳ ವಿರುದ್ಧ ಭಾರತೀಯರು ಸುರಕ್ಷಿತರಾಗಿರುವ ಸಾಧ್ಯತೆ ಹೆಚ್ಚಿದ್ದರೂ ಜನರು ಜಾಗರೂಕರಾಗಿರಬೇಕು, ಮಾಸ್ಕ್ ಧರಿಸುವುದನ್ನು ಮರೆಯಬಾರದು ಎಂದು ಹೇಳಿದ್ದಾರೆ.
ಎರಡನೇ ಅಲೆಯಲ್ಲಿ ಡೆಲ್ಟಾ ರೂಪಾಂತರಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಹರಡಿತ್ತು. ನಾಲ್ಕನೇ ರಾಷ್ಟ್ರೀಯ ಸೆರೋ-ಸಮೀಕ್ಷೆಯ ಪ್ರಕಾರ ಶೇ.67 ರಷ್ಟು ಭಾರತೀಯರಿಗೆ ಕೋವಿಡ್-19 ಪ್ರತಿಕಾಯಗಳಿವೆ ಎಂಬುದು ಬಹಿರಂಗವಾಗಿದೆ ಎಂದು ಶಾಹಿದ್ ಜಮೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: 'ಒಮಿಕ್ರಾನ್' ಈಗಾಗಲೇ ದೇಶವನ್ನು ಪ್ರವೇಶಿಸಿರಬಹುದು: ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಳದ ಅಗತ್ಯವಿದೆ- ಡಾ. ಗಗನ್ ದೀಪ್ ಕಾಂಗ್
ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಶೇ.97 ರಷ್ಟು ಮಂದಿಗೆ ಪ್ರತಿಕಾಯಗಳಿದ್ದರೆ, ಮುಂಬೈ ನಲ್ಲಿ ಪ್ರಕಾಯಗಳನ್ನು ಹೊಂದಿರುವ ಮಂದಿ ಶೇ.85-90 ರಷ್ಟಿದ್ದಾರೆ. ಈ ಎಲ್ಲಾ ದೃಷ್ಟಿಯಿಂದ ಹೆಚ್ಚಿನ ಭಾರತೀಯರು ಓಮಿಕ್ರಾನ್ ಹಾಗೂ ಇನ್ನಿತರ ರೂಪಾಂತರಿಗಳ ವಿರುದ್ಧ ಸುರಕ್ಷಿತರಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ಜಮೀಲ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರಗೊಂಡಿರುವ ಕೋವಿಡ್-19 ನ ಹೊಸ ತಳಿ ಓಮಿಕ್ರಾನ್ ಪತ್ತೆಯಾದಾಗಿನಿಂದಲೂ ಜಾಗತಿಕ ಮಟ್ಟದಲ್ಲಿ ಮತ್ತೆ ಕೋವಿಡ್-19 ಸೋಂಕು ಪ್ರಸರಣ ಹೆಚ್ಚಾಗುವ ಭೀತಿ ಎದುರಾಗಿದೆ.