ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಳಿಗಾಲ ಅಧಿವೇಶನ: 12 ಸಂಸದರ ಅಮಾನತು ಸಮರ್ಥಿಸಿಕೊಂಡ ವೆಂಕಯ್ಯ ನಾಯ್ಡು, ಸದನ ಬಹಿಷ್ಕರಿಸಿ ಪ್ರತಿಪಕ್ಷಗಳಿಂದ ಪ್ರತಿಭಟನೆ

ಮುಂಗಾರು ಅಧಿವೇಶನದ ವೇಳೆಯಲ್ಲಿ 12 ರಾಜ್ಯಸಭಾ ಸಂಸದರ ಅಮಾನತುಗೊಳಿಸಿದ್ದನ್ನು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಮಂಗಳಾರ ಸಮರ್ಥಿಸಿಕೊಂಡಿದ್ದು, ಅಮಾನತು ಆದೇಶ ಹಿಂಪಡೆಯಬೇಕೆಂಬ ಪ್ರತಿಪಕ್ಷಗಳ ಮನವಿಯನ್ನು ತಿರಸ್ಕರಿಸಿದ್ದಾರೆ.

ನವದೆಹಲಿ: ಮುಂಗಾರು ಅಧಿವೇಶನದ ವೇಳೆಯಲ್ಲಿ 12 ರಾಜ್ಯಸಭಾ ಸಂಸದರ ಅಮಾನತುಗೊಳಿಸಿದ್ದನ್ನು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಮಂಗಳಾರ ಸಮರ್ಥಿಸಿಕೊಂಡಿದ್ದು, ಅಮಾನತು ಆದೇಶ ಹಿಂಪಡೆಯಬೇಕೆಂಬ ಪ್ರತಿಪಕ್ಷಗಳ ಮನವಿಯನ್ನು ತಿರಸ್ಕರಿಸಿದ್ದಾರೆ.

ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದು ಮಾತನಾಡಿದ ವೆಂಕಯ್ಯ ನಾಯ್ಡು ಅವರು, ಕಳೆದ ಚಳಿಗಾ ಅಧಿವೇಶನದಲ್ಲಿ ನಡೆದ ಕಹಿ ಘಟನೆ ಇನ್ನೂ ನಮ್ಮಲ್ಲಿ ಹೆಚ್ಚಿನವರನ್ನು ಕಾಡುತ್ತಲೇ ಇದೆ. ಸದನದ ಕೆಲವು ಹಿರಿಯರು ಘಟನೆಯ ವಿರುದ್ಧವಾಗಿ ತಮ್ಮ ಆಕ್ರೋಶ ಹೊರಹಾಕುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಇಂತಹ ಪ್ರತಿಕ್ರಿಯೆಗಳು ವಿಷಯವನ್ನು ಸೂಕ್ತವಾಗಿ ನಿಭಾಯಿಸಲು ನನಗೆ ಸಹಾಯ ಮಾಡುತ್ತಿತ್ತು ಆದರೆ ದುರದೃಷ್ಟವಶಾತ್ ಅದು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ್ದ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯಸಭಾ ಅಧ್ಯಕ್ಷರು ಮತ್ತು ಉಪರಾಷ್ಟ್ರಪತಿಯೂ ಆದ ವೆಂಕಯ್ಯ ನಾಯ್ಡು ಅವರಲ್ಲಿ ಸಂಸದರ ಅಮಾನತು ಹಿಂಪಡೆಯುವಂತೆ ಮನವಿ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ವೆಂಕಯ್ಯ ನಾಯ್ಡು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮನವಿಯನ್ನು ನಾನು ಪರಿಗಣಿಸುತ್ತಿಲ್ಲ. ಅಮಾನತು ಹಿಂಪಡೆಯುವುದಿಲ್ಲ ಎಂದು ಹೇಳಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸದಸ್ಯರು ಸದನದಿಂದ ಹೊರನಡೆದು ಪ್ರತಿಭಟನೆ ವ್ಯಕ್ತಪಡಿಸಿದರು.

ಈ ನಡುವೆ 12 ರಾಜ್ಯಸಭಾ ಸದಸ್ಯರ ಅಮಾನತು ಆದೇಶ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಲೋಕಸಭೆಯಲ್ಲೂ ಗದ್ದಲವುಂಟಾಗಿದ್ದು, ವಿಪಕ್ಷಗಳು ಸದನವನ್ನು ಬಹಿಷ್ಕರಿಸಿ, ಹೊರನಡೆದಿವೆ. ಈ ಕಾರಣದಿಂದಾಗಿ ಮಧ್ಯಾಹ್ನ 2 ಗಂಟೆಯವರೆಗೆ ಸದನವನ್ನು ಮುಂದೂಡಲಾಗಿದೆ.

ಈ ಎಲ್ಲಾ ಬೆಳವಣಿಗೆ ನಡುವಲ್ಲೇ ರಾಜ್ಯಸಭಾ ಸದಸ್ಯರ ಅಮಾನತು ಆದೇಶ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ, ಲೋಕಸಭೆ ಮತ್ತು ರಾಜ್ಯಸಭೆಯಿಂದ ಹೊರನಡೆದ ಸಂಸದರು ಸಂಸತ್​ ಭವನದ ಹೊರಗಿರುವ ಗಾಂಧಿ ಭವನದ ಎದುರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com