"ಲಸಿಕೆ ಅರ್ಹತೆ ರಾಷ್ಟ್ರಗಳ ಪಟ್ಟಿ ಪರಿಶೀಲನೆಯಲ್ಲಿದೆ":ಭಾರತದ ಪ್ರತಿಕ್ರಿಯಾತ್ಮಕ ನಡೆಗೆ ಬ್ರಿಟನ್ ಪ್ರತಿಕ್ರಿಯೆ
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಬ್ರಿಟನ್ ಸರ್ಕಾರ ಪ್ರಕಟಿಸಿರುವ ಕೋವಿಡ್-19 ನಿಯಮಗಳಲ್ಲಿ ಭಾರತದ ಲಸಿಕೆಯನ್ನು ಮಾನ್ಯ ಮಾಡದೇ ಇರುವುದಕ್ಕೆ ಪ್ರತಿಯಾಗಿ ಭಾರತ ಕೈಗೊಂಡ ಕ್ರಮಗಳ ಬಗ್ಗೆ ಬ್ರಿಟನ್ ಸರ್ಕಾರ ಪ್ರತಿಕ್ರಿಯೆ ನೀಡಿದೆ.
Published: 02nd October 2021 01:13 AM | Last Updated: 02nd October 2021 01:13 AM | A+A A-

ಲಸಿಕೆ (ಸಾಂಕೇತಿಕ ಚಿತ್ರ)
ನವದೆಹಲಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಬ್ರಿಟನ್ ಸರ್ಕಾರ ಪ್ರಕಟಿಸಿರುವ ಕೋವಿಡ್-19 ನಿಯಮಗಳಲ್ಲಿ ಭಾರತದ ಲಸಿಕೆಯನ್ನು ಮಾನ್ಯ ಮಾಡದೇ ಇರುವುದಕ್ಕೆ ಪ್ರತಿಯಾಗಿ ಭಾರತ ಕೈಗೊಂಡ ಕ್ರಮಗಳ ಬಗ್ಗೆ ಬ್ರಿಟನ್ ಸರ್ಕಾರ ಪ್ರತಿಕ್ರಿಯೆ ನೀಡಿದೆ.
ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಲಸಿಕೆ ಅರ್ಹತೆಯ ಪಟ್ಟಿ ನಿರಂತರ ಪರಿಶೀಲನೆಯಲ್ಲಿದೆ ಎಂದು ಬ್ರಿಟನ್ ಸರ್ಕಾರದ ಮೂಲಗಳು ಹೇಳಿವೆ. ಭಾರತ ಬ್ರಿಟನ್ ನಿಂದ ಬರುವವರಿಗೆ ಲಸಿಕೆ ಸ್ಥಿತಿ ಏನೇ ಇದ್ದರೂ 10 ದಿನಗಳ ಕ್ವಾರಂಟೈನ್ ಹಾಗೂ ಆರ್ ಟಿಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿದ ಬೆನ್ನಲ್ಲೇ ಬ್ರಿಟನ್ ಈ ಹೇಳಿಕೆ ನೀಡಿದೆ.
ಬ್ರಿಟನ್ ಸರ್ಕಾರ 18 ಲಸಿಕೆ ಅರ್ಹತೆಯ ದೇಶಗಳ ಪಟ್ಟಿಯಲ್ಲಿ ಭಾರತವನ್ನು ಕೈಬಿಟ್ಟಿತ್ತು. ಬ್ರಿಟನ್ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ಭಾರತೀಯ ಪ್ರಯಾಣಿಕರು ಕೋವಿಶೀಲ್ಡ್ ಲಸಿಕೆಯನ್ನು ಪಡೆದಿದ್ದರೆ ಅದನ್ನು ಲಸಿಕೆ ಪಡೆದಿಲ್ಲ ಎಂದು ಪರಿಗಣಿಸಬೇಕಾಗುತ್ತದೆ ಹಾಗೂ 10 ದಿನಗಳವರೆಗೆ ಸೆಲ್ಫ್ ಐಸೊಲೇಷನ್ ಗೆ ಒಳಪಡಬೇಕಾಗುತ್ತದೆ ಎಂಬ ನಿಯಮ ಜಾರಿಗೊಳಿಸಿತ್ತು.
ಬ್ರಿಟೀಷ್ ಹೈಕಮಿಷನ್ ಹಾಗೂ ಆರೋಗ್ಯ ಸಚಿವಾಲಯದ ನಡುವೆ ಲಸಿಕೆ ಪ್ರಮಾಣಪತ್ರ ವ್ಯವಸ್ಥೆಗೆ ಸಂಬಂಧಿಸಿದಂತೆ ಸರಣಿ ಮಾತುಕತೆ ನಡೆದ ಬಳಿಕ ಭಾರತ ಸರ್ಕಾರ ಪ್ರತಿಕ್ರಿಯಾತ್ಮಕವಾದ ಕ್ರಮ ಕೈಗೊಂಡಿದೆ.
"ಲಸಿಕೆ ಅರ್ಹತೆ ದೇಶಗಳ ಪಟ್ಟಿ ನಿರಂತರವಾದ ಪರಿಶೀಲನೆಯಲ್ಲಿದೆ ಹಾಗೂ ಇನ್ನೂ ಹೆಚ್ಚಿನ ದೇಶಗಳನ್ನು ಈ ಪಟ್ಟಿಗೆ ಸೇರಿಸುವ ವಿಶ್ವಾಸವಿದೆ ಆದರೆ ಅದಕ್ಕೆ ಯಾವುದೇ ಗಡುವನ್ನೂ ವಿಧಿಸಿಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ಹಾಗೂ ಪ್ರಯಾಣವನ್ನು ಸುರಕ್ಷಿತ, ಸ್ಥಿರ ರೀತಿಯಲ್ಲಿ ಪುನಾರಂಭಗೊಳಿಸುವುದು ನಮ್ಮ ಆದ್ಯತಾಗಿದೆ. ಆದ್ದರಿಂದ ಎಲ್ಲಾ ದೇಶಗಳ ಲಸಿಕೆ ಪ್ರಮಾಣಪತ್ರಗಳು ಕನಿಷ್ಠ ಮಾನದಂಡಗಳನ್ನು ಪೂರೈಕೆ ಮಾಡಬೇಕು ಎಂದು ಬ್ರಿಟನ್ ಹೇಳಿದ್ದು ಭಾರತವೂ ಸೇರಿದಂತೆ ಎಲ್ಲಾ ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ನಾವು ನಮ್ಮ ಹಂತ ಹಂತದ ವಿಧಾನವನ್ನು ಜಾರಿಗೆ ತರಲು ಕೆಲಸ ಮಾಡುತ್ತೇವೆ ಎಂದು ಬ್ರಿಟನ್ ಈ ಹಿಂದೆ ಹೇಳಿತ್ತು.