ಅದಾನಿ ಬಂದರಿನಲ್ಲಿ ಡ್ರಗ್ಸ್ ಪತ್ತೆ: ತನಿಖೆಗೆ ಕಾಂಗ್ರೆಸ್ ಆಗ್ರಹ

ಅದಾನಿ ಬಂದರಿನಲ್ಲಿ ಡ್ರಗ್ಸ್ ಪತ್ತೆಯಾದ ಪ್ರಕರಣ ಇದೀಗ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ತನಿಖೆಗೆ ಆಗ್ರಹಿಸಿದೆ. 
ಗೌತಮ್ ಅದಾನಿ
ಗೌತಮ್ ಅದಾನಿ

ಬೆಂಗಳೂರು: ಅದಾನಿ ಬಂದರಿನಲ್ಲಿ ಡ್ರಗ್ಸ್ ಪತ್ತೆಯಾದ ಪ್ರಕರಣ ಇದೀಗ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ತನಿಖೆಗೆ ಆಗ್ರಹಿಸಿದೆ. 

ಅದಾನಿ ಮುಂದ್ರಾ ಬಂದರಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮೌನ ವಹಿಸಿರುವುದೇಕೆ ? ಇದು ದೇಶದ ಭದ್ರತೆಗೆ ಅಪಾಯ ತರುವ ವಿಚಾರವಾಗಿದ್ದು, ಇದರ ಹಿಂದೆ ಯಾರಿದ್ದಾರೆ ಎಂಬುದರ ಪತ್ತೆಗೆ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ವಕ್ತಾರರಾದ ಸುಪ್ರಿಯಾ ಶ್ರೀನೇಟ್ ‘ಅದಾನಿ ಮುಂದ್ರಾ ಬಂದರಿನಲ್ಲಿ ಈ ರೀತಿ ಡ್ರಗ್ಸ್ ಪತ್ತೆ ಪ್ರಕರಣ ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ಡ್ರಗ್ಸ್ ಪತ್ತೆಯಾಗಿದ್ದು, ಆದರೂ ಬಂದರು ನಡೆಸುತ್ತಿರುವ ಅದಾನಿ ಸಮೂಹದ ವಿಚಾರಣೆ ನಡೆಸಿಲ್ಲ ಯಾಕೆ?’ ಎಂದು ಪ್ರಶ್ನಿಸಿದರು.

‘ಕೆಲ ದಿನಗಳ ಹಿಂದೆ ಗುಜರಾತಿನ ಅದಾನಿ ಮುಂದ್ರಾ ಬಂದರಿನಲ್ಲಿ 3 ಸಾವಿರ ಕೆಜಿ ಅಂದರೆ 21 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು.ಇದು ದೇಶದ ಯುವಕರ ಭವಿಷ್ಯದ ವಿಷಯವಾಗಿದ್ದರೂ ವಿಚಾರವಾಗಿ ನರೇಂದ್ರ ಮೋದಿ ಮಾತನಾಡುತ್ತಿಲ್ಲ ಎಂದು ಅವರು ಪ್ರಶ್ನೆ ಮಾಡಿದರು. 

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮುಂದ್ರಾ ಬಂದರಿನಲ್ಲಿ ಇತ್ತೀಚೆಗೆ 21,000 ಕೋಟಿ ರೂ. ಮೌಲ್ಯದ 3000 ಕೆ.ಜಿ. ಡ್ರಗ್ಸ್‌ ಪತ್ತೆಯಾಗಿದೆ. ಕಳೆದ ಜೂನ್‌ನಲ್ಲಿ ಅಫ್ಘಾನಿಸ್ತಾನದ ಹಸನ್‌ ಹುಸೇನ್‌ ಲಿಮಿಟೆಡ್‌ ಕಂಪೆನಿ 25,000 ಕೆ.ಜಿ. ಅಂದರೆ 1.75 ಲಕ್ಷ ಕೋಟಿ ರೂ. ಮೊತ್ತದ ಹೆರಾಯಿನ್‌ ರಫ್ತು ಮಾಡಿತ್ತು. ಅದು ದೇಶದ ಮಾರುಕಟ್ಟೆಯಲ್ಲಿ ಸರಬರಾಜಾಗುತ್ತಿದೆ. ಹೀಗಾಗಿ ಡ್ರಗ್ಸ್‌ ಸಾಗಣೆ ಮೊದಲಲ್ಲ ಎನ್ನುವುದು ಸ್ಪಷ್ಟ. ಹಾಗಿದ್ದರೂ ಬಂದರು ವ್ಯವಹಾರ ನಡೆಸುತ್ತಿರುವ ಅದಾನಿ ಸಮೂಹದ ವಿಚಾರಣೆ ನಡೆಸುತ್ತಿಲ್ಲ ಎಂದು ಆರೋಪಿಸಿದರು.

ಸಿಕ್ಕಿರುವ ಡ್ರಗ್ಸ್‌ಗೆ ಸೆಮಿ ಕಟ್‌ ಟಾಲ್ಕಮ್‌ ಪೌಡರ್‌ ಎಂದು ಹೆಸರಿಸಲಾಗಿದ್ದು, ಈ ಡ್ರಗ್ಸ್‌ ಅನ್ನು ತಾಲಿಬಾನ್‌ ಹಿಡಿತದಲ್ಲಿರುವ ಅಫ್ಘಾನಿಸ್ತಾನದಿಂದ ಆಶಿ ಟ್ರೇಡಿಂಗ್‌ ಕಂಪೆನಿ ಆಮದು ಮಾಡಿಕೊಂಡಿದೆ. ಪ್ರಕರಣ ಸಂಬಂಧ ಆಶಿ ಟ್ರೇಡಿಂಗ್‌ ಕಂಪೆನಿ ಮಾಲೀಕರಾದ ಸುಧಾಕರ್‌ ಮಚ್ವರಮ್‌, ಅವರ ಪತ್ನಿ ಗವಿಂದ ರಾಜು ವೈಶಾಲಿ ಅವರ ಬಂಧನವಾಗಿದೆ. ಸಣ್ಣ ಟ್ರೇಡಿಂಗ್‌ ಕಂಪೆನಿ ಇಷ್ಟು ದೊಡ್ಡ ಮೊತ್ತದ ಡ್ರಗ್ಸ್‌ ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಇದರ ಹಿಂದೆ ಪ್ರಭಾವಿಗಳ ಕೈವಾಡದ ಶಂಕೆಯಿದೆ. ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೌನವೇಕೆ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರಕ್ಕೆ ದಶಪ್ರಶ್ನೆ?
ಕಳೆದ ಜೂನ್‌ನಲ್ಲಿ ಆಮದುಗೊಂಡ 1.75 ಲಕ್ಷ ಕೋಟಿ ರೂ. ಮೌಲ್ಯದ 25,000 ಕೆ.ಜಿ. ಹೆರಾಯಿನ್‌ ನಾಪತ್ತೆಯಾಗಿದ್ದು, ಈ ತನಿಖೆ ಏಕಿಲ್ಲ? ಭಾರತದ ಮಾದಕ ದ್ರವ್ಯ ನಿಯಂತ್ರಣ ಮಂಡಳಿ, ಸಿಬಿಐಐ, ಇಡಿ, ಡಿಆರ್‌ಐ ಸಂಸ್ಥೆಗಳು ಏನು ಮಾಡುತ್ತಿವೆ? ಪ್ರಧಾನಿ, ಕೇಂದ್ರ ಗೃಹ ಸಚಿವರ ಮೌನಕ್ಕೆ ಕಾರಣವೇನು? 18 ತಿಂಗಳಿನಿಂದ ದೇಶದ ಮಾದಕ ದ್ರವ್ಯ ನಿಯಂತ್ರಣ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರ ಹುದ್ದೆ ಖಾಲಿ ಇರುವುದೇಕೆ ಎಂಬುದು ಸೇರಿದಂತೆ ದಶಪ್ರಶ್ನೆಗಳನ್ನು ಸುಪ್ರಿಯಾ ಶ್ರೀನಾಥೆ ಅವರು ಕೇಂದ್ರ ಸರ್ಕಾರಕ್ಕೆ ಕೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com