ಬಿಜೆಪಿ ಸರ್ಕಾರದ ದುರಾಡಳಿತದ ಪ್ರಾಯಶ್ಚಿತ್ತಕ್ಕಾಗಿ ಸ್ವಪಕ್ಷ ಶಾಸಕನಿಂದಲೇ ಕೇಶಮುಂಡನ!
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ 'ತಪ್ಪುಗಳಿಗೆ ಪ್ರಾಯಶ್ಚಿತ್ತವಾಗಿ' ತ್ರಿಪುರ ರಾಜ್ಯದ ಸುರ್ಮಾ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಹಿರಿಯ ಮುಖಂಡ ಆಶಿಶ್ ದಾಸ್ ಅವರು ಕೇಶಮುಂಡನ ಮಾಡಿಸಿಕೊಂಡಿದ್ದಾರೆ.
Published: 06th October 2021 11:05 AM | Last Updated: 06th October 2021 11:05 AM | A+A A-

ಬಿಜೆಪಿ ಶಾಸಕನಿಂದ ಕೇಶಮುಂಡನ
ಗುವಾಹಟಿ: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ 'ತಪ್ಪುಗಳಿಗೆ ಪ್ರಾಯಶ್ಚಿತ್ತವಾಗಿ' ತ್ರಿಪುರ ರಾಜ್ಯದ ಸುರ್ಮಾ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಹಿರಿಯ ಮುಖಂಡ ಆಶಿಶ್ ದಾಸ್ ಅವರು ಕೇಶಮುಂಡನ ಮಾಡಿಸಿಕೊಂಡಿದ್ದಾರೆ.
ತ್ರಿಪುರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ರಾಜಕೀಯ ಅರಾಜಕತೆ ಮತ್ತು ಗದ್ದಲವನ್ನು ಉಂಟುಮಾಡುತ್ತಿದೆ. ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಜನರು ಅಸಂತುಷ್ಟರಾಗಿದ್ದಾರೆ. ಹೀಗಾಗಿ ತಾವು ಪಕ್ಷವನ್ನು ತೊರೆಯಲು ನಿರ್ಧರಿಸಿರುವುದಾಗಿ ಹೇಳಿದ್ದು, ಕೋಲ್ಕತಾದ ಪ್ರಸಿದ್ಧ ಕಾಳಿಘಾಟ್ ದೇವಸ್ಥಾನದಲ್ಲಿ ಯಜ್ಞ ನಡೆಸಿದ್ದಾರೆ.
ಸ್ವಪಕ್ಷೀಯರ ವಿರುದ್ಧವೇ ಸತತ ವಾಗ್ದಾಳಿ ನಡೆಸುತ್ತಿರುವ ಆಶಿಶ್ ದಾಸ್, ಕಳೆದ ಎರಡು ವರ್ಷಗಳಿಂದ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ವಿರುದ್ಧ ತೀಕ್ಷ್ಣ ಟೀಕೆಗಳನ್ನು ಮಾಡಿದ್ದರು. ಜತೆಗೆ ಪ್ರಧಾನಿ ಹುದ್ದೆಗೆ ಮಮತಾ ಬ್ಯಾನರ್ಜಿ ಸೂಕ್ತ ವ್ಯಕ್ತಿ ಹೇಳಿದ್ದರು.
ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಪ್ರಾಯಶ್ಚಿತ್ತವಾಗಿ ನಾನು ಕೇಶಮುಂಡನ ಮಾಡಿಸಿಕೊಳ್ಳುತ್ತಿದ್ದೇನೆ. ನಾನು ಪಕ್ಷವನ್ನು ತ್ಯಜಿಸಲು ಮತ್ತು ಮುಂದಿನ ಹೆಜ್ಜೆ ಇರಿಸಲು ನಿರ್ಧರಿಸಿದ್ದೇನೆ. ತ್ರಿಪುರ ಕಂಡ ಬಿಜೆಪಿ ನೇತೃತ್ವದ ಸರ್ಕಾರದ ಅರಾಜಕತೆ ಹಾಗೂ ದುರಾಡಳಿತವು ನನಗೆ ನೋವನ್ನುಂಟುಮಾಡಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ನಾನು ಅವರ ಎಲ್ಲ ತಪ್ಪುಗಳನ್ನು ಟೀಕಿಸುತ್ತಾ ಬಂದಿದ್ದೇನೆ ಮತ್ತು ಪಕ್ಷ ಹಾಗೂ ರಾಜಕೀಯದಾಚೆ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ' ಎಂದು ಹೇಳಿದ್ದಾರೆ.