ಲಖಿಂಪುರ್ ಖೇರಿ ಹಿಂಸಾಚಾರ: ಇಬ್ಬರ ಬಂಧನ; ಮುಂದಿನ ಬೇಟೆ ಮುಖ್ಯ ಆರೋಪಿ ಆಶಿಶ್ ಮಿಶ್ರಾ ಎಂದ ಯುಪಿ ಪೊಲೀಸ್!

ಲಖಿಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಲವ್ ಕುಶ್ ಮತ್ತು ಆಶಿಶ್ ಪಾಂಡ್ಯ ಎಂಬುವರನ್ನು ಬಂಧಿಸಿದ್ದು ಶೀಘ್ರವೇ ಮುಖ್ಯ ಆರೋಪಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾರನ್ನು ಬಂಧಿಸುತ್ತೇವೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಆಶಿಶ್ ಮಿಶ್ರಾ
ಆಶಿಶ್ ಮಿಶ್ರಾ

ಲಖನೌ: ಲಖಿಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಲವ್ ಕುಶ್ ಮತ್ತು ಆಶಿಶ್ ಪಾಂಡ್ಯ ಎಂಬುವರನ್ನು ಬಂಧಿಸಿದ್ದು ಶೀಘ್ರವೇ ಮುಖ್ಯ ಆರೋಪಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾರನ್ನು ಬಂಧಿಸುತ್ತೇವೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. 

ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಕ್ರಮಕೈಗೊಂಡಿದ್ದೀರಾ ಎಂದು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

ಇದರ ಬೆನ್ನಲ್ಲೇ ಆರೋಪಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಇನ್ನು ಪ್ರಮುಖ ಆರೋಪಿ ಆಶಿಶ್ ಮಿಶ್ರಾನನ್ನು ಬಂಧಿಸಲಾಗುವುದು. ಆತನ ವಿರುದ್ಧ ಕೊಲೆ, ಗಲಭೆ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಐಪಿಸಿಯ ಎಂಟು ಸೆಕ್ಷನ್ ಅಡಿಯಲ್ಲಿ  ಎಫ್ಐಆರ್ ದಾಖಲಿಸಲಾಗಿದೆ ಎಂದರು. 

ಉತ್ತರಪ್ರದೇಶ ಪೊಲೀಸ್ ಲಖನೌ ವ್ಯಾಪ್ತಿಯ ಐಜಿ ಲಕ್ಷ್ಮಿ ಸಿಂಗ್ ಪ್ರಕಾರ, ಲಖಿಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಶಿಶ್ ಮಿಶ್ರಾ ಅವರನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.  ಅಲ್ಲದೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳು ಮತ್ತು ಇತರ ಮಾಹಿತಿಯನ್ನೂ ತನಿಖೆಗಾಗಿ ಕೋರಲಾಗಿದೆ ಎಂದು ಹೇಳಿದರು.

ಏತನ್ಮಧ್ಯೆ, ಇಡೀ ದೇಶದ ಗಮನ ಸೆಳೆದಿರುವ ಲಖಿಂಪುರ್ ಖೇರಿ ಹಿಂಸಾಚಾರದ ಕುರಿತು ನ್ಯಾಯಾಂಗ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರವು ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರನ್ನು ನೇಮಿಸಿದೆ.

ಕಳೆದ ಭಾನುವಾರ ರಾತ್ರಿ ಕೇಂದ್ರ ಸಚಿವ ಅಜಯ್​ ಮಿಶ್ರಾ ಅವರ ತಂದೆಯ ಊರು ಲಖೀಂಪುರ ಖೇರಿಯ ಟಿಕೂನಿಯಾ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ ಕೃಷಿ ಕಾಯ್ದೆ ವಿರೋಧಿಸಿ ರೈತರು ಒಟ್ಟುಗೂಡಿ ಪ್ರತಿಭಟನೆ ನಡೆಸುವ ಮೂಲಕ ಕಾರನ್ನು ತಡೆದಿದ್ದರು. ಈ ವೇಳೆ ಎರಡು ಕಾರು ಅವರ ಮೇಲೆ ಹರಿದು ನಾಲ್ವರು ರೈತರು ಮೃತಪಟ್ಟಿದ್ದರು. ಈ ಘಟನೆಯಿಂದ ಹಿಂಸಾಚಾರ ನಡೆದಿದ್ದು, ಇಲ್ಲಿಯವರೆಗೆ 8 ಮಂದಿ ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com