ಏರ್ ಇಂಡಿಯಾ ಉದ್ಯೋಗಿಗಳನ್ನು ಟಾಟಾ ಗ್ರೂಪ್ ಒಂದು ವರ್ಷ ಸೇವೆಯಲ್ಲಿ ಉಳಿಸಿಕೊಳ್ಳಬೇಕು: ವಿಮಾನಯಾನ ಸಚಿವಾಲಯ
ಏರ್ ಇಂಡಿಯಾ ಬಿಡ್ಡಿಂಗ್ ನಲ್ಲಿ ಗೆದ್ದು ಸಂಸ್ಥೆಯನ್ನು ತನ್ನದಾಗಿಸಿಕೊಂಡಿರುವ ಟಾಟಾ ಗ್ರೂಪ್ ಕನಿಷ್ಠ ಒಂದು ವರ್ಷದವರೆಗೆ ನೌಕರರನ್ನು ಉಳಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಹೇಳಿದೆ.
Published: 09th October 2021 10:43 AM | Last Updated: 09th October 2021 01:22 PM | A+A A-

ಏರ್ ಇಂಡಿಯಾ
ನವದೆಹಲಿ: ಏರ್ ಇಂಡಿಯಾ ಬಿಡ್ಡಿಂಗ್ ನಲ್ಲಿ ಗೆದ್ದು ಸಂಸ್ಥೆಯನ್ನು ತನ್ನದಾಗಿಸಿಕೊಂಡಿರುವ ಟಾಟಾ ಗ್ರೂಪ್ ಕನಿಷ್ಠ ಒಂದು ವರ್ಷದವರೆಗೆ ನೌಕರರನ್ನು ಉಳಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ಈಗಿರುವ ಏರ್ ಇಂಡಿಯಾ ನೌಕರರ ಹಿತಾಸಕ್ತಿಗಳನ್ನು ಕಾಪಾಡಲಾಗುತ್ತಿದ್ದು, ಒಂದು ವರ್ಷ ನಂತರ ಸಂಸ್ಥೆ ಸೇವೆಯಿಂದ ತೆಗೆದುಹಾಕುವ ನೌಕರರಿಗೆ ವಿಆರ್ ಎಸ್ ಸೌಲಭ್ಯವನ್ನು ನೀಡಬೇಕೆಂದು ಸರ್ಕಾರ ತಾಕೀತು ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿದ ವಿಮಾನಯಾನ ಸಚಿವಾಲಯ ಕಾರ್ಯದರ್ಶಿ ರಾಜೀವ್ ಬನ್ಸಲ್, ಈಗಿರುವ ಎಲ್ಲಾ ನೌಕರರ ಹಿತಾಸಕ್ತಿಗಳನ್ನು ಪರಿಗಣಿಸಲಾಗುವುದು. ನಮ್ಮ ಬಿಡ್ಡಿಂಗ್ ನಲ್ಲಿ ಗೆದ್ದಿರುವ ಟಾಟಾ ಗ್ರೂಪ್ ನೌಕರರನ್ನು ಕಂಪೆನಿಯಲ್ಲಿ ಉಳಿಸಿಕೊಳ್ಳಬೇಕು. ಅದರರ್ಥ ಒಂದು ವರ್ಷದವರೆಗೆ ಕೆಲಸದಿಂದ ತೆಗೆದುಹಾಕುವಂತಿಲ್ಲ. ಒಂದು ವರ್ಷ ಬಳಿಕ ಸೇವೆಯಿಂದ ತೆಗೆದುಹಾಕುವ ನೌಕರರಿಗೆ ಅವರಿಗೆ ಸ್ವಯಂ ನಿವೃತ್ತಿ ಯೋಜನೆಯ ಸೌಲಭ್ಯವನ್ನು ನೀಡಬೇಕು ಎಂದು ಸರ್ಕಾರ ನಿಯಮ ತಂದಿದೆ ಎಂದರು.
ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಬಿಡ್ಡಿಂಗ್ ನಲ್ಲಿ ಟಾಟಾ ಸನ್ಸ್ 18 ಸಾವಿರ ಕೋಟಿ ರೂಪಾಯಿಗೆ ಗೆದ್ದು ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ದಿವಾಳಿಯ ಹಂತಕ್ಕೆ ತಲುಪಿರುವ ಏರ್ ಇಂಡಿಯಾದ ವೈಭವವನ್ನು ಮರು ನಿರ್ಮಾಣ ಮಾಡಲು ಮುಂದಾಗಲಿದೆ. ದೇಶದ ಕಾನೂನಿನ ಪ್ರಕಾರ ಉದ್ಯೋಗಿಗಳಿಗೆ ಗ್ರಾಚ್ಯುಟಿ ಮತ್ತು ಭವಿಷ್ಯ ನಿಧಿ ಪ್ರಯೋಜನಗಳನ್ನು ಒದಗಿಸಲಾಗುವುದು. ನಿವೃತ್ತಿ ಹೊಂದಿದ ಅಥವಾ ನಿವೃತ್ತರಾದವರಿಗೆ ನಿವೃತ್ತಿ ನಂತರದ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಬನ್ಸಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಏರ್ ಇಂಡಿಯಾ ಮರು ನಿರ್ಮಾಣಕ್ಕೆ ಗಮನಾರ್ಹ ಪ್ರಯತ್ನ- ರತನ್ ಟಾಟಾ
ಏರ್ ಇಂಡಿಯಾದಲ್ಲಿ ಒಟ್ಟು 8 ಸಾವಿರದ 084 ಖಾಯಂ ಮತ್ತು 4 ಸಾವಿರ 001 ಗುತ್ತಿಗೆ ಸಿಬ್ಬಂದಿಯನ್ನು ಒಳಗೊಂಡು ಒಟ್ಟು 12 ಸಾವಿರದ 085 ಉದ್ಯೋಗಿಗಳಿದ್ದಾರೆ. ಅದರ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಾವಿರದ 434 ಉದ್ಯೋಗಿಗಳನ್ನು ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು 5 ಸಾವಿರ ಉದ್ಯೋಗಿಗಳು ಸಂಸ್ಥೆಯಿಂದ ನಿವೃತ್ತರಾಗಲಿದ್ದಾರೆ. ನಿವೃತ್ತ ನೌಕರರು ನಿಯಮಗಳ ಪ್ರಕಾರ ವೈದ್ಯಕೀಯ ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಸುಮಾರು 55 ಸಾವಿರ ನಿವೃತ್ತ ಸಿಬ್ಬಂದಿ ಏರ್ ಇಂಡಿಯಾದೊಂದಿಗೆ ಸಂಬಂಧ ಹೊಂದಿದ್ದಾರೆ.
ಏರ್ ಇಂಡಿಯಾ ಮತ್ತೆ ಟಾಟಾ ಕುಟುಂಬಕ್ಕೆ ಹೋಗುತ್ತಿರುವುದು ಸಂತಸವುಂಟಾಗುತ್ತಿದೆ. ಟಾಟಾ ಸಂಸ್ಥೆ ಜೊತೆ ಕೆಲಸ ಮಾಡಲು ಇದಿರು ನೋಡುತ್ತಿದ್ದೇವೆ ಎಂದು ಏರ್ ಇಂಡಿಯಾ ಪೈಲಟ್ ಅಸೋಸಿಯೇಷನ್ ಇಂಡಿಯನ್ ಪೈಲಟ್ ಗಿಲ್ಡ್ ಸ್ವಾಗತಿಸಿದೆ. ಈ ಮುನ್ನ ಏರ್ ಇಂಡಿಯಾ ನೌಕರರ ಒಕ್ಕೂಟ, ನೌಕರರ ನಿವೃತ್ತಿ ಮತ್ತು ಸರ್ಕಾರದಿಂದ ಸಿಗುವ ಇತರ ಸೌಲಭ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.