ಸುಧಾಮನ ಮನೆಗೆ ಕೃಷ್ಣ ಬಂದಂತೆ, 106 ವರ್ಷದ ಬಿಜೆಪಿ ಹಿರಿಯ ಕಾರ್ಯಕರ್ತರನ್ನು ಭೇಟಿ ಮಾಡಿದ ರಾಜನಾಥ್ ಸಿಂಗ್!
ದೇಶದ ಅತ್ಯಂತ ಹಿರಿಯ ಬಿಜೆಪಿ ಕಾರ್ಯಕರ್ತ ಎಂಬ ಹೆಗ್ಗಳಿಕೆ ಹೊಂದಿರುವ ಉತ್ತರ ಪ್ರದೇಶದ ಭುಲಾಯಿ ಭಾಯಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾದರು.
Published: 14th October 2021 08:31 PM | Last Updated: 14th October 2021 08:31 PM | A+A A-

ರಾಜನಾಥ್ ಸಿಂಗ್ ರಿಂದ ಪಕ್ಷದ ಹಿರಿಯ ಕಾರ್ಯಕರ್ತರ ಭೇಟಿ
ನವದೆಹಲಿ: ದೇಶದ ಅತ್ಯಂತ ಹಿರಿಯ ಬಿಜೆಪಿ ಕಾರ್ಯಕರ್ತ ಎಂಬ ಹೆಗ್ಗಳಿಕೆ ಹೊಂದಿರುವ ಉತ್ತರ ಪ್ರದೇಶದ ಭುಲಾಯಿ ಭಾಯಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾದರು.
ಯುಪಿ ಭವನದಲ್ಲಿ ಭುಲಾಯಿ ಭಾಯಿ ಅವರನ್ನು ಆತ್ಮೀಯವಾಗಿ ಭೇಟಿ ಮಾಡಿದ ರಾಜನಾಥ್ ಸಿಂಗ್, ಭುಲಾಯಿ ಭಾಯಿ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು. ಈ ವೇಳೆ ರಾಜನಾಥ್ ಅವರನ್ನು ಅತ್ಯಂತ ಸಂಭ್ರಮದಿಂದ ಎದುರುಗೊಂಡ ಭುಲಾಯಿ ಭಾಯಿ, ರಕ್ಷಣಾ ಸಚಿವರಿಗೆ ಪ್ರೀತಿಯ ಅಪ್ಪುಗೆ ನೀಡಿದರು.
ಬಳಿಕ ಮಾತನಾಡಿದ ರಾಜನಾಥ್ ಸಿಂಗ್ ದೇಶದ ಅತ್ಯಂತ ಹಿರಿಯ ಬಿಜೆಪಿ ಕಾರ್ಯಕರ್ತ ಭುಲಾಯಿ ಭಾಯಿ ಅವರನ್ನು ಭೇಟಿ ಮಾಡಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದರು. ಜನಸಂಘದ ಶಾಸಕರಾಗಿದ್ದ ಭೂಲಾಯಿ ಭಾಯಿ, 1977ರಲ್ಲಿ ನಾನು ಶಾಸಕನಾಗಿ ಆಯ್ಕೆಯಾದಾಗ ನಮಗೆ ಮಾರ್ಗದರ್ಶನ ಮಾಡಿದ ಹಿರಿಯರು ಎಂದು ರಾಜನಾಥ್ ಸಿಂಗ್ ಮೆಚ್ಚುಗೆಯ ಮಾತುಗಳನ್ನಾಡಿದರು.
ದಸರಾ ಹಬ್ಬಕ್ಕೂ ಮುನ್ನಾದಿನ ಭುಲಾಯಿ ಭಾಯಿ ಅವರ ಆಶೀರ್ವಾದ ಪಡೆದಿರುವುದು ನಿಜಕ್ಕೂ ಸಂತಸದ ಸಂಗತಿ. ಪಕ್ಷ ಮತ್ತು ನಮ್ಮೆಲ್ಲರ ಮೇಲೆ ಅವರ ಆಶೀರ್ವಾದ ಸದಾಕಾಲ ಇರಲಿ ಎಂಬುದು ನನ್ನ ಮನದಾಳದ ಹಾರೈಕೆ ಎಂದು ರಾಜನಾಥ್ ಸಿಂಗ್ ಈ ವೇಳೆ ಭಾವುಕರಾಗಿ ನುಡಿದರು.
ರಾಜನಾಥ್ ಸಿಂಗ್ ಭೇಟಿ ನಂತರ ಮಾತನಾಡಿದ ಭುಲಾಯಿ, ಕೃಷ್ಣ ಸುಧಾಮನನ್ನು ಭೇಟಿ ಮಾಡಿದಂತಾಯಿತು ಎಂದು ನುಡಿದರು.ನಾವು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದೆವು, ಅವರನ್ನು ಭೇಟಿ ಮಾಡಿದ್ದು ಸಂತೋಷ ತಂದಿತು ಎಂದು ಅಭಿಪ್ರಾಯ ಪಟ್ಟರು.