ನವರಾತ್ರಿ ಕೋವಿಡ್-19 ಲಸಿಕೆ ಹಬ್ಬದ ಋತುವಿನಲ್ಲಿ ಕ್ಷೀಣ: ಸೋಂಕು ಹೆಚ್ಚುವ ಆತಂಕದಲ್ಲಿ ತಜ್ಞರು
ನವರಾತ್ರಿ ಹಬ್ಬದ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಜನತೆ ಮುನ್ನೆಚ್ಚರಿಕಾ ಕ್ರಮಗಳಿಲ್ಲದೇ ಜೊತೆಗೂಡಿರುವುದು ಏಕಾ ಏಕಿ ಕೋವಿಡ್-19 ಏರಿಕೆ ಸಾಧ್ಯತೆಯ ಆತಂಕಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.
Published: 17th October 2021 09:05 AM | Last Updated: 17th October 2021 09:28 AM | A+A A-

ಹಿರಿಯ ನಾಗರಿಕರಿಗೆ ಲಸಿಕೆ ನೀಡಿಕೆ
ನವದೆಹಲಿ: ನವರಾತ್ರಿ ಹಬ್ಬದ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಜನತೆ ಮುನ್ನೆಚ್ಚರಿಕಾ ಕ್ರಮಗಳಿಲ್ಲದೇ ಜೊತೆಗೂಡಿರುವುದು ಏಕಾ ಏಕಿ ಕೋವಿಡ್-19 ಏರಿಕೆ ಸಾಧ್ಯತೆಯ ಆತಂಕಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಈ ನಡುವೆ ಕೋವಿಡ್-19 ಲಸಿಕೆ ನೀಡುವ ಪ್ರಮಾಣವೂ ಅಕ್ಟೋಬರ್ ತಿಂಗಳಲ್ಲಿ ಕುಸಿತ ಕಂಡಿರುವುದೂ ಕೋವಿಡ್-19 ಸೋಂಕಿನ ಏಕಾ ಏಕಿ ಏರಿಕೆ ಸಾಧ್ಯತೆಗಳ ಬಗ್ಗೆ ಆತಂಕವನ್ನು ಹೆಚ್ಚಿಸಿದೆ.
ಜನವರಿ 16 ರಿಂದ ಪ್ರಾರಂಭವಾದ ಲಸಿಕೆ ಅಭಿಯಾನವನ್ನು ಸಾರ್ವಜನಿಕರಿಗೆ ದಿನಂಪ್ರತಿ ಪ್ರಾರಂಭವಾಗಿದ್ದು ಆಗಸ್ಟ್ ತಿಂಗಳಲ್ಲಿ. ಸೆಪ್ಟೆಂಬರ್ ತಿಂಗಳಲ್ಲಿ ದಿನವೊಂದಕ್ಕೆ 80 ಲಕ್ಷವಿದ್ದ ಲಸಿಕೆ ನೀಡುವ ಪ್ರಮಾಣ ಈಗ ಅಕ್ಟೋಬರ್ ತಿಂಗಳಲ್ಲಿ 50 ಲಕ್ಷಕ್ಕೆ ಕುಸಿದಿದೆ. ದಿನವೊಂದಕ್ಕೆ ಒಂದು ಕೋಟಿ ನೀಡಲಾಗುತ್ತಿದ್ದ ಲಸಿಕೆಯ ಪ್ರಮಾಣ ಈಗ ಅರ್ಧಕ್ಕೆ ಕುಸಿತ ಕಂಡಿದೆ.
ಅಕ್ಟೋಬರ್ 1 ರಿಂದ 15 ವರೆಗೆ 8,12,41,556 ಲಸಿಕೆಗಳನ್ನು ನೀಡಲಾಗಿದ್ದು, ಒಟ್ಟು 97.57 ಕೋಟಿ ಲಸಿಕೆಗಳನ್ನು ಜನವರಿ 16 ರಿಂದ ಈ ವರೆಗೂ ನೀಡಾಲಾಗಿದೆ. ಆರೋಗ್ಯ ಸಚಿವಾಲಯದ ಅಧಿಕಾರಿಗಳು ಲಸಿಕೆ ಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
"ಲಸಿಕೆ ಕುಸಿತ ಕಂಡಿರುವುದು ಆತಂಕಕ್ಕೆ ಕಾರಣವಾಗಿದ್ದು, ಹಬ್ಬದ ದಿನಗಳಾಗಿರುವುದರಿಂದ ರಾಜ್ಯಗಳು ಲಸಿಕೆ ನೀಡುವ ಪ್ರಮಾಣವನ್ನು ಹೆಚ್ಚಿಸಬೇಕು, ಎರಡನೇ ಡೋಸ್ ಬಾಕಿ ಇರುವವರಿಗೆ ಬೇಗ ಲಸಿಕೆ ನೀಡುವತ್ತ ವಿಶೇಷ ಗಮನ ಹರಿಸಬೇಕೆಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಪೂರ್ಣ ಪ್ರಮಾಣದ ಲಸಿಕೆ ಪಡೆದವರಿಗೆ ಮಾತ್ರ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಲು ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಲಹೆ ನೀಡಿತ್ತು ಆದರೆ ಅಧಿಕಾರಿಗಳ ಪ್ರಕಾರ ಈ ರೀತಿ ನಿಯಮವನ್ನು ಎಲ್ಲೂ ಪಾಲನೆ ಮಾಡಿರುವುದು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಕಳೆದ ವಾರ ಮಾತನಾಡಿ, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳು ಕೋವಿಡ್-19 ದೃಷ್ಟಿಯಿಂದ ತೀರಾ ಮುಖ್ಯವಾದದ್ದು ಎಂದು ಎಚ್ಚರಿಸಿದ್ದರು.