ಉತ್ತರಾಖಂಡದಲ್ಲಿ ವರುಣನ ಅಬ್ಬರಕ್ಕೆ 34 ಮಂದಿ ಬಲಿ, ನೈನಿತಾಲದಲ್ಲಿ ಗರಿಷ್ಠ ಸಾವು
ಉತ್ತರಾಖಂಡದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ವರ್ಷಧಾರೆಯಾಗುತ್ತಿದ್ದು, ನೈನಿತಾಲ್ ಹಾಗೂ ಅಲ್ಮೋರಾದಲ್ಲಿ ಮಳೆಸಂಬಂಧಿ ಅವಘಡಗಳಿಗೆ ಸಿಲುಕಿ 34 ಮಂದಿ ಮೃತಪಟ್ಟಿದ್ದಾರೆ.
Published: 19th October 2021 10:46 PM | Last Updated: 19th October 2021 10:46 PM | A+A A-

ಎನ್ ಡಿಆರ್ ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ
ನೈನಿತಾಲ್: ಉತ್ತರಾಖಂಡದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ವರ್ಷಧಾರೆಯಾಗುತ್ತಿದ್ದು, ನೈನಿತಾಲ್ ಹಾಗೂ ಅಲ್ಮೋರಾದಲ್ಲಿ ಮಳೆಸಂಬಂಧಿ ಅವಘಡಗಳಿಗೆ ಸಿಲುಕಿ 34 ಮಂದಿ ಮೃತಪಟ್ಟಿದ್ದಾರೆ.
ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 34ಕ್ಕೆ ತಲುಪಿದ್ದು, ಐವರು ಇನ್ನೂ ನಾಪತ್ತೆಯಾಗಿದ್ದಾರೆ. ಮೃತರ ಸಂಬಂಧಿಕರಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಘೋಷಿಸಿದ್ದಾರೆ.
ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ 1.9 ಲಕ್ಷ ರೂಪಾಯಿ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಇದನ್ನು ಓದಿ: ಉತ್ತರಾಖಂಡ ಪ್ರವಾಹ: ನೀರಿನಲ್ಲಿ ಕೊಚ್ಚಿಕೊಂಡು ಹೋದ ಸೇತುವೆ, ಯಾತ್ರೆ ಸ್ಥಗಿತ
ರಾಜ್ಯದಲ್ಲಿನ ಮಳೆ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಹಿತಿ ಪಡೆದಿದ್ದು, ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರ ಸಹ ಪರಿಸ್ಥಿತಿಯನ್ನು ನಿಭಾಯಿಸಲಿದೆ ಎಂಬ ಆಶ್ವಾಸನೆ ನೀಡಿದ್ದೇನೆ. ಮೂರು ಹೆಲಿಕಾಫ್ಟರ್ ಗಳ ನೆರವು ನೀಡುವಂತೆ ಭಾರತೀಯ ಸೇನೆಯನ್ನು ಕೇಳಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಭಾರೀ ಮಳೆಯಿಂದಾಗಿ ಹಲವು ಸೇತುವೆಗಳು ಮತ್ತು ಮನೆಗಳು ಕುಸಿದಿವೆ. ಭೂಕುಸಿತದಲ್ಲಿ ಹಲವರು ಸಮಾಧಿಯಾಗಿದ್ದು, ಅನೇಕ ಜನರು ಕಾಣೆಯಾಗಿದ್ದಾರೆ. ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ನೈನಿತಾಲ್ ಅತಿ ಹೆಚ್ಚು ಜನ ಮೃತಪಟ್ಟಿದ್ದಾರೆ. ಮಳೆಯಿಂದಾಗಿ ನೈನಿತಾಲ್ ಹಾಗೂ ಅಲ್ಮೋರಾ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಎನ್ ಡಿಆರ್ ಎಫ್ 15 ರಕ್ಷಣಾ ತಂಡಗಳನ್ನು ನಿಯೋಜಿಸಿದೆ. ರಕ್ಷಣಾ ತಂಡಗಳು ಉಧಮ್ ಸಿಂಗ್ ನಗರ ಜಿಲ್ಲೆ ಮತ್ತು ಇತರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ 300 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ.