ಉತ್ತರಾಖಂಡ ಪ್ರವಾಹ: ನೀರಿನಲ್ಲಿ ಕೊಚ್ಚಿಕೊಂಡು ಹೋದ ಸೇತುವೆ, ಯಾತ್ರೆ ಸ್ಥಗಿತ

ಪ್ರವಾಹ ಬಾಧಿತ ಉತ್ತರಾಖಂಡದಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿ ಚಂಪಾವತ್ ನಲ್ಲಿನ ಚಲ್ತಿ ನದಿ ಮೇಲಿನ ನಿರ್ಮಾಣ ಹಂತದ ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. 
ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಚಿತ್ರ
ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಚಿತ್ರ

ಡೆಹ್ರಾಡೂನ್:  ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉತ್ತರಾಖಂಡ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ನೀರಿನ ಮಟ್ಟದಲ್ಲಿ ಏರಿಕೆಯಾಗಿ ಚಂಪಾವತ್ ನಲ್ಲಿನ ಚಲ್ತಿ ನದಿ ಮೇಲಿನ ನಿರ್ಮಾಣ ಹಂತದ ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ನೈನಿತಾಲ್ ನ ಮನೆಗಳು ಹಾಗೂ ಕಟ್ಟಡಗಳು ನೀರು ನುಗ್ಗಿದ್ದು, ಜನರು ತೀವ್ರ ತೊಂದರೆ ಎದುರಿಸುವಂತಾಗಿದೆ. ಕೋಶಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿ ರಾಮನಗರ್- ರಾಣಿಕೇಟ್ ಮಾರ್ಗದಲ್ಲಿನ ಲೆಮೆನ್ ಟ್ರೀ ರೆಸಾರ್ಟ್ ನಲ್ಲಿ ಸಿಲುಕಿಕೊಂಡಿದ್ದ ಸುಮಾರು 100 ಮಂದಿಯನ್ನು ರಕ್ಷಿಸಲಾಗಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ. 

ಕಳೆದ 48 ಗಂಟೆಗಳಿಂದ ನಿರಂತರವಾಗಿ ಬೀಳುತ್ತಿರುವ ಧಾರಾಕಾರ ಮಳೆಯಿಂದಾಗಿ ಏಳು ಕಡೆಗಳಲ್ಲಿ ಅವಶೇಷಗಳು ಬಿದ್ದಿರುವ ಕಾರಣ ಚಮೋಲಿ ಜಿಲ್ಲೆಯ ಬದ್ರಿನಾಥ್ ರಾಷ್ಟ್ರಿಯ ಹೆದ್ದಾರಿ ಸಂಪೂರ್ಣವಾಗಿ ಕಡಿತಗೊಂಡಿರುವುದಾಗಿ ಜಿಲ್ಲಾಡಳಿತ ಮಂಗಳವಾರ ತಿಳಿಸಿದೆ.  ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಉತ್ತರಾಖಂಡ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಎದುರಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಾತನಾಡಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಬದ್ರಿನಾಥ ಚಾರ್ ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಬದ್ರಿನಾಥ ದೇವಾಲಯಕ್ಕೆ ಆಗಮಿಸುತ್ತಿದ್ದ ಭಕ್ತರನ್ನು ಸುರಕ್ಷಿತ ಪ್ರದೇಶಗಳಲ್ಲಿ ತಡೆಯಿಡಿಯಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com