ಪ್ರಿಯಾಂಕಾ ಗಾಂಧಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳಾ ಪೊಲೀಸರ ವಿರುದ್ಧ ಕ್ರಮ ಸಾಧ್ಯತೆ
ಲಖನೌದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಸೆಲ್ಫಿ ತೆಗೆದುಕೊಂಡ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸರ ಮೇಲೆ ಕ್ರಮದ ಕತ್ತಿ ನೇತಾಡುತ್ತಿದೆ.
Published: 21st October 2021 07:41 PM | Last Updated: 22nd October 2021 05:05 PM | A+A A-

ಪ್ರಿಯಾಂಕಾ ಗಾಂಧಿ
ಲಖನೌ: ಲಖನೌದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಸೆಲ್ಫಿ ತೆಗೆದುಕೊಂಡ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸರ ಮೇಲೆ ಕ್ರಮದ ಕತ್ತಿ ನೇತಾಡುತ್ತಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಕರ್ತವ್ಯದಲ್ಲಿದ್ದಾಗ ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳಾ ಪೋಲಿಸರನ್ನು ಗುರುತಿಸಿ ನೋಟಿಸ್ ನೀಡಲಾಗುವುದು ಮತ್ತು ಅದೂ ಸಮವಸ್ತ್ರದಲ್ಲಿ ಸೆಲ್ಫಿ ತೆಗೆದುಕೊಂಡಿದ್ದನ್ನು "ಅಶಿಸ್ತು" ಎಂದು ಪರಿಗಣಿಸಲಾಗಿದೆ.
ಆದಾಗ್ಯೂ, ಗುರುವಾರ ಸಂಜೆಯವರೆಗೆ, ಯಾವುದೇ ನೋಟಿಸ್ ಅನ್ನು ಮಹಿಳಾ ಪೋಲೀಸರಿಗೆ ನೀಡಿಲ್ಲ ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ.
ಇದನ್ನು ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಫೋನ್, ಸ್ಕೂಟಿ: ಪ್ರಿಯಾಂಕಾ ಗಾಂಧಿ
ಏತನ್ಮಧ್ಯೆ, ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದು, ತಮ್ಮೊಂದಿಗೆ ಸೆಲ್ಫಿ ಕ್ಲಿಕ್ಕಿಸುವುದು ಅಪರಾಧವಾಗಿದ್ದರೆ, ತನಗೇ ಶಿಕ್ಷೆ ನೀಡಬೇಕೇ ಹೊರತು ಪೊಲೀಸರಿಗೆ ಅಲ್ಲ. "ಈ ಚಿತ್ರದಿಂದ ಯೋಗಿ ಜಿ ತುಂಬಾ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಅವರು ಈ ಮಹಿಳಾ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಬಯಸುತ್ತಾರೆ. ನನ್ನೊಂದಿಗೆ ಚಿತ್ರಗಳನ್ನು ತೆಗೆದುಕೊಳ್ಳುವುದು ಅಪರಾಧವಾಗಿದ್ದರೆ, ಅದಕ್ಕಾಗಿ ನನಗೂ ಶಿಕ್ಷೆಯಾಗಬೇಕು. ಈ ಶ್ರಮಶೀಲ ಮತ್ತು ನಿಷ್ಠಾವಂತ ಪೊಲೀಸರ ವೃತ್ತಿಜೀವನವನ್ನು ಹಾಳು ಮಾಡುವುದು ಸರ್ಕಾರಕ್ಕೆ ಸರಿಹೊಂದುವುದಿಲ್ಲ,”ಎಂದು ಅವರು ಹೇಳಿದ್ದಾರೆ.
ಆಗ್ರಾದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಪೌರ ಕಾರ್ಮಿಕ ಅರುಣ್ ವಾಲ್ಮೀಕಿಯವರ ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಬುಧವಾರ ಮಧ್ಯಾಹ್ನ ಲಖನೌ-ಆಗ್ರಾ ಎಕ್ಸ್‌ಪ್ರೆಸ್‌ವೇ ಪ್ರವೇಶ ದ್ವಾರದಲ್ಲಿ ತಡೆಯಲಾಗಿತ್ತು. ಈ ಸಮಯದಲ್ಲಿ, ಪ್ರಿಯಾಂಕಾ ಗಾಂಧಿ ಅವರನ್ನು ತಡೆಯಲು ಬಂದ ಕೆಲ ಮಹಿಳಾ ಪೊಲೀಸರು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.