ಧನ್ಬಾಗ್ ನ್ಯಾಯಧೀಶರ ಹಿಟ್-ರನ್ ಪ್ರಕರಣ: ಸಿಬಿಐಗೆ ಜಾರ್ಖಂಡ್ ಹೈಕೋರ್ಟ್ ತರಾಟೆ
ಧನ್ಬಾಗ್ ನ ಹಿಟ್&ರನ್ ಪ್ರಕರಣದಲ್ಲಿ ಸಿಬಿಐ ಚಾರ್ಜ್ ಶೀಟ್ ಗೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜಾರ್ಖಂಡ್ ಹೈಕೋರ್ಟ್ ತನಿಖಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ.
Published: 22nd October 2021 07:16 PM | Last Updated: 22nd October 2021 07:16 PM | A+A A-

ಧನ್ಬಾಗ್ ಹಿಟ್-ರನ್ ಪ್ರಕರಣ
ರಾಂಚಿ: ಧನ್ಬಾಗ್ ನ ಹಿಟ್&ರನ್ ಪ್ರಕರಣದಲ್ಲಿ ಸಿಬಿಐ ಚಾರ್ಜ್ ಶೀಟ್ ಗೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜಾರ್ಖಂಡ್ ಹೈಕೋರ್ಟ್ ತನಿಖಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ.
ತನಿಖಾ ಸಂಸ್ಥೆಯವರು ಸೆಕ್ರೆಟರಿಯಟ್ ನ ಅಧಿಕಾರಿಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದು ಜಾರ್ಖಂಡ್ ನ್ಯಾಯಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಹೈಕೋರ್ಟ್ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದರೂ ಸಹ ಚಾರ್ಜ್ ಶೀಟ್ ಸಲ್ಲಿಸುವುದಕ್ಕೂ ಮುನ್ನ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಸಿಬಿಐ ನಡೆಗೆ ನ್ಯಾ. ಡಾ ರವಿ ರಂಜನ್ ಹಾಗೂ ನ್ಯಾ. ಸುಜಿತ್ ನಾರಾಯಣ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಆಕ್ಷೇಪ ವ್ಯಕ್ತಪಡಿಸಿದೆ.
3 ತಿಂಗಳ ತನಿಖೆ ಅವಧಿಯಲ್ಲಿ ತನಿಖಾ ಸಂಸ್ಥೆ ಪ್ರಕರಣವನ್ನು ಯಾವುದೇ ತಾರ್ಕಿಕ ಅಂತ್ಯಕ್ಕೂ ಕೊಂಡೊಯ್ಯದೇ ಇರುವುದರ ಬಗ್ಗೆಯೂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ಕೋರ್ಟ್ ಈ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದೆ ಎನ್ನುವಾಗಲೂ ಸಿಬಿಐ ಕೋರ್ಟ್ ನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಚಾರ್ಜ್ ಶೀಟ್ ಸಲ್ಲಿಸುವುದಕ್ಕೆ ಹೇಗೆ ಸಾಧ್ಯ? ಈ ರೀತಿ ಮಾಡಿದರೆ ಮೇಲ್ವಿಚಾರಣೆ ನಡೆಸುವುದರ ಉದ್ದೇಶವಾದರೂ ಏನು? ಎಂದು ಕೋರ್ಟ್ ನ ಅಡ್ವೊಕೇಟ್ ಅಸೋಸಿಯೇಷನ್ ನ ಖಜಾಂಚಿ ಧೀರಜ್ ಕುಮಾರ್ ಹೇಳಿದ್ದಾರೆ.
ಚಾರ್ಜ್ ಶೀಟ್ ನಲ್ಲಿ ಹತ್ಯೆಯ ಉದ್ದೇಶವನ್ನು ಉಲ್ಲೇಖಿಸದೇ ಸಿಬಿಐ ಇಡೀ ಪ್ರಕರಣದ ತನಿಖೆಯನ್ನು ಹಳ್ಳಹತ್ತಿಸಿದೆ. ಹತ್ಯೆಯ ಉದ್ದೇಶವೇ ತಿಳಿಯದ ಮೇಲೆ ಪ್ರಕರಣದ ತನಿಖೆಯ ದಿಕ್ಕೇ ಬದಲಾಗಿ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಬಹುದು ಎಂದು ಕೋರ್ಟ್ ಎಚ್ಚರಿಸಿದೆ.
ನ್ಯಾಯಾಧೀಶರಿಗೆ ಆಟೋರಿಕ್ಷಾ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿರುವುದು ಸಿಸಿಟಿವಿ ಫುಟೇಜ್ ನಲ್ಲಿ ದಾಖಲಾಗಿದೆ. ನ್ಯಾಯಾಧೀಶರು ಜುಲೈ 28 ರಂದು ವಾಕಿಂಗ್ ಮಾಡುತ್ತಿದ್ದಾಗ ಆಟೋ ರಿಕ್ಷಾ ಡಿಕ್ಕಿ ಹೊಡೆದು ಮೃತಪಟ್ಟಿದ್ದರು.