ಪಾಟ್ನ: ಬಿಹಾರ ರಾಜಕಾರಣಕ್ಕೆ ಜಿಗ್ನೇಶ್ ಮೇವಾನಿ, ಹಾರ್ದಿಕ್ ಪಟೇಲ್, ಕನ್ಹಯ್ಯ ಕುಮಾರ್ ಅವರ ಪ್ರವೇಶದ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಕಾರ್ಯತಂತ್ರವನ್ನು ಬದಲಾಯಿಸಿಕೊಂಡಿದ್ದು, ಆರ್ ಜೆಡಿಯೊಂದಿಗಿನ ಮೈತ್ರಿಯಿಂದ ಹೊರ ನಡೆದಿದೆ.
ಆರ್ ಜೆಡಿಯೊಂದಿಗಿನ ಮೈತ್ರಿಯಿಂದ ಹೊರಬರುವ ವಿಷಯವನ್ನು ಸ್ಪಷ್ಟಪಡಿಸಿರುವ ಕಾಂಗ್ರೆಸ್ ಬಿಹಾರದ ಮುಂಬರುವ ಉಪಚುನಾವಣೆಯಲ್ಲಿ ಅಷ್ಟೇ ಅಲ್ಲದೇ 2024 ರಲ್ಲಿ 40 ಲೋಕಸಭಾ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿದೆ.
ಕನ್ಹಯ್ಯ ಕುಮಾರ್, ಜಿಗ್ನೇಶ್ ಮೇವಾನಿ ಹಾಗೂ ಹಾರ್ದಿಕ್ ಪಟೇಲ್ ಅವರು ಮುಂಬರುವ ವಿಧಾನಸಭಾ ಉಪಚುನಾವಣೆಗೆ ಸ್ಟಾರ್ ಪ್ರಚಾರಕರಾಗಿದ್ದಾರೆ.
ಕನ್ಹಯ್ಯ ಕುಮಾರ್ ನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುತ್ತಿದ್ದಂತೆಯೇ ಆರ್ ಜೆಡಿ-ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯ ತೀವ್ರಗೊಂಡಿತ್ತು.
ಅ.30 ರಂದು ನಡೆಯಲಿರುವ ಚುನಾವಣೆಗೆ ಕುಶೇಶ್ವರ್ ಆಸ್ತಾನ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕೆಂದು ಪಟ್ಟು ಹಿಡಿದಿತ್ತು. 2020 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಈ ಕ್ಷೇತ್ರದಿಂದ ಸ್ಪರ್ಧಿಸಿತ್ತು. ಆದರೆ ಈ ಬಾರಿ ಎರಡೂ ಕ್ಷೇತ್ರಗಳಲ್ಲಿ ಆರ್ ಜೆಡಿ ತನ್ನ ಅಭ್ಯರ್ಥಿಯನ್ನು ಘೋಷಿಸಿತ್ತು.
ಉಪಚುನಾವಣೆಗಳ ಬೆಳವಣಿಗೆ ಕಾಂಗ್ರೆಸ್ ಗೆ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಪಾಠ ಕಲಿಸಿದೆ. ದೀರ್ಘಾವಧಿಯಲ್ಲಿ ಯಾವುದೇ ಪಕ್ಷದ ಮೇಲೆ ಅವಲಂಬನೆ ಇರುವುದು ಸೂಕ್ತವಲ್ಲ ಎಂಬುದು ಅರ್ಥವಾಗಿದೆ ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ತಾರೀಕ್ ಅನ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಕನ್ಹಯ್ಯ ಕುಮಾರ್ ನಂತಹ ನಾಯಕರೊಂದಿಗೆ ಚುನಾವಣೆ ಎದುರಿಸಲು ಸಜ್ಜುಗೊಂಡಿದ್ದು ಎರಡು ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲಿದೆ ಎಂದು ಬಿಹಾರ ಪ್ರದೇಶ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿರುವ ಭಕ್ತ ಚರಣ್ ದಾಸ್ ಮಾಹಿತಿ ನೀಡಿದ್ದಾರೆ.
Advertisement