ಭಾರತ ತಂಡದ ಸೋಲು: ಜಮ್ಮು-ಕಾಶ್ಮೀರದ ಕೆಲವೆಡೆ ಸಂಭ್ರಮ, ಕೋಪ ಏಕೆ ಎಂದ ಮೆಹಬೂಬಾ ಮುಫ್ತಿ!

ಕಳೆದ ಭಾನುವಾರ ನಡೆದ  ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧ  ಬಾಬರ್ ನೇತೃತ್ವದ ಪಾಕ್ ತಂಡದ ಗೆಲುವನ್ನು ಜಮ್ಮು ಮತ್ತು ಕಾಶ್ಮೀರದ ಕೆಲವೆಡೆ ಸಂಭ್ರಮಿಸಲಾಯಿತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಅಪ್ ಲೋಡ್ ಮಾಡಿರುವ ಬಗ್ಗೆ ವರದಿಯಾಗಿದೆ. 
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ

ಶ್ರೀನಗರ: ಕಳೆದ ಭಾನುವಾರ ನಡೆದ  ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧ  ಬಾಬರ್ ನೇತೃತ್ವದ ಪಾಕ್ ತಂಡದ ಗೆಲುವನ್ನು ಜಮ್ಮು ಮತ್ತು ಕಾಶ್ಮೀರದ ಕೆಲವೆಡೆ ಸಂಭ್ರಮಿಸಲಾಯಿತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಅಪ್ ಲೋಡ್ ಮಾಡಿರುವ ಬಗ್ಗೆ ವರದಿಯಾಗಿದೆ. 

ಕೇಂದ್ರಾಡಳಿತ ಪ್ರದೇಶದಲ್ಲಿನ ಪಾಕ್ ಗೆಲುವಿನ ಸಂಭ್ರಮವನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಕಠಿಣ ಶಬ್ಧಗಳಲ್ಲಿ ಭಾರತೀಯರು ಟೀಕಿಸುತ್ತಿದ್ದಾರೆ. ಆದರೆ, ಈ ಸಂಭ್ರಮವನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಮರ್ಥನೆ ಮಾಡಿಕೊಂಡಿದ್ದಾರೆ.

ಪಾಕಿಸ್ತಾನದ ವಿಜಯವನ್ನು ಸಂಭ್ರಮಿಸುವ ಕಾಶ್ಮೀರಿಗಳ ವಿರುದ್ಧ ನಿಮಗೆ ಏಕೆ ಇಷ್ಟೊಂದು ಕೋಪ? ಸಂತಸ ವ್ಯಕ್ತಪಡಿಸುವವರ ವಿರುದ್ಧ ಕೊಲೆ ಮಾಡುವ ಘೋಷಣೆ ಮಾಡುತ್ತಿದ್ದಾರೆ. ದೇಶ ದ್ರೋಹಿಗಳನ್ನು ಕೊಲೆ ಮಾಡಿ, ಗುಂಡಿಕ್ಕಿ ಅಂತಾ ಕರೆ ನೀಡುತ್ತಿದ್ದಾರೆ. ಆದರೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಕಿತ್ತುಕೊಂಡಾಗ ಇದೇ ಜನ ಸಿಹಿ ಹಂಚಿ ಸಂಭ್ರಮಿಸಿದ್ದರು. ಕೊಲೆ ಮಾಡಿ ಅನ್ನೋ ಈಗಿನ ಜನ, ಅಂದು ಏಕೆ ಜಮ್ಮು-ಕಾಶ್ಮೀರದ ಜನರ ಪರ ನಿಲ್ಲಲಿಲ್ಲ ಅಂತಾ ಮೆಹಬೂಬಾ ಮುಫ್ತಿ ಟ್ವೀಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಪಟಾಕಿ ಸಿಡಿಸಿ ಪಾಕಿಸ್ತಾನದ ಗೆಲುವಿಗೆ ಸಂಭ್ರಮಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸಲು ನಿಷೇಧ ಹೇರಲಾಗಿದೆ. ಆದರೆ, ಭಾರತದ ವಿರುದ್ಧ ಪಾಕ್ ಗೆದ್ದಾಗ ಪಟಾಕಿ ಸಿಡಿಸಲಾಗಿದೆ. ಈ ಬೂಟಾಟಿಕೆ ಏಕೆ ಅಂತಾ ವೀರೇಂದ್ರ ಸೆಹ್ವಾಗ್ ಟ್ವೀಟ್ ನಲ್ಲಿ ಕಟುವಾಗಿ ಟೀಕಿಸಿದ್ದರು.

ಈ ಮಧ್ಯೆ ಭಾರತ ಹಾಗೂ ಪಾಕಿಸ್ತಾನದ ಕ್ರಿಕೆಟ್ ಪಂದ್ಯದ ನಂತರ ಗಲಾಟೆ ನಡೆದಿರುವ ಸುದ್ದಿಗಳು ಬೆಳಕಿಗೆ ಬರುತ್ತಿವೆ. ಪಂಜಾಬ್ ನ ಸಂಗ್ರೂರ್ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲ ಕಾಶ್ಮೀರಿ ವಿದ್ಯಾರ್ಥಿಗಳು ಹಾಗೂ ಯುಪಿ ಮತ್ತು ಬಿಹಾರಿ ವಿದ್ಯಾರ್ಥಿಗಳ ಮಧ್ಯೆ ಜಟಾಪಟಿ ನಡೆದಿರುವ ಬಗ್ಗೆಯೂ ವರದಿಯಾಗಿದೆ. ಪಂದ್ಯ ಮುಕ್ತಾಯವಾದ ನಂತರ ದೇಶ ವಿರೋಧಿ ಘೋಷಣೆಗಳನ್ನು ಕೆಲ ವಿದ್ಯಾರ್ಥಿಗಳು ಕೂಗಿದರು. ಇದು ಗಲಾಟೆಗೆ ಕಾರಣವಾಯಿತು ಅಂತಾ ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com