ಗೋವನ್ನು 'ರಾಷ್ಟ್ರೀಯ ಪ್ರಾಣಿ' ಎಂದು ಘೋಷಿಸಬೇಕು, ಗೋಮಾಂಸ ಭಕ್ಷಣೆ ಮೂಲಭೂತ ಹಕ್ಕಲ್ಲ: ಅಲಹಾಬಾದ್ ಹೈಕೋರ್ಟ್

ಗೋವು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದ್ದು, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಗೋವು
ಗೋವು

ಅಲಹಾಬಾದ್: ಗೋವು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದ್ದು, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಗೋವನ್ನು ಕದ್ದು, ಕೊಂದ ಆರೋಪದ ಮೇರೆಗೆ ಬಂಧಿತನಾಗಿದ್ದ ಸಾಂಬಲ್‌ ಜಿಲ್ಲೆಯ ಜಾವೇದ್‌ ನ ಜಾಮೀನು ಅರ್ಜಿ ವಿಚಾರಣೆ ನಡೆಸಿದ  ಅಲಹಾಬಾದ್ ಹೈಕೋರ್ಟ್, 'ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಹಾಗೂ ಗೋ ಹತ್ಯೆ ಮಾಡುವವರನ್ನು ಶಿಕ್ಷಿಸುವ ನಿಟ್ಟಿನಲ್ಲಿ ಸಂಸತ್ತು ಕಾನೂನು ರೂಪಿಸಬೇಕು ಎಂದು ಹೇಳಿ, ಜಾಮೀನು ನಿರಾಕರಿಸಿದೆ.

ಗೋಮಾಂಸ ಭಕ್ಷಣೆ ಮೂಲಭೂತ ಹಕ್ಕಲ್ಲ
ಗೋವು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ ಎಂದು ಹೇಳಿರುವ ಹೈಕೋರ್ಟ್‌, ಮೂಲಭೂತ ಹಕ್ಕು ಗೋಮಾಂಸ ತಿನ್ನುವವರಿಗಷ್ಟೇ ಅಲ್ಲದೆ, ಗೋವುಗಳನ್ನು ಪೂಜಿಸುವ ಮತ್ತು ಅದರ ಮೇಲೆಯೇ ಆರ್ಥಿಕವಾಗಿ ಅವಲಂಬಿಸಿರುವವರಿಗೂ ಇದೆ. ಜೀವಿಸುವ ಹಕ್ಕು ಕೊಲ್ಲುವ ಹಕ್ಕನ್ನು ಮೀರಿದ್ದು ಮತ್ತು ಗೋಮಾಂಸ ತಿನ್ನುವ ಹಕ್ಕನ್ನು ಎಂದಿಗೂ ಮೂಲಭೂತ ಹಕ್ಕಾಗಿ ಪರಿಗಣಿಸಲಾಗದು. ಇದು ಅರ್ಜಿದಾರರ ಮೊದಲ ಅಪರಾಧವಲ್ಲ. ಈ ಅಪರಾಧಕ್ಕೂ ಮುನ್ನ, ಅವರು ಹಲವು ಗೋ ಹತ್ಯೆಯನ್ನು ಮಾಡಿದ್ದಾರೆ. ಇದು ಸಮಾಜದಲ್ಲಿ ಸಾಮರಸ್ಯವನ್ನು ಕದಡಿದೆ. ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾದರೆ ಮತ್ತೆ ಅದೇ ಅಪರಾಧ ಎಸಗುತ್ತಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮುಸ್ಲಿಂ ಆಡಳಿತಗಾರರೇ ಗೋವನ್ನು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗ ಎಂದು ಪರಿಗಣಿಸಿದ್ದರು
ಗೋವಿನ ಮಹತ್ವವನ್ನು ಹಿಂದೂಗಳಂತೆಯೇ ಮುಸ್ಲಿಂ ಆಡಳಿತಗಾರರು ಅರ್ಥ ಮಾಡಿ ಕೊಂಡಿದ್ದರು. ಗೋವನ್ನು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗ ಎಂದು ಅವರೂ ಪರಿಗಣಿಸಿದ್ದರು. ಉದಾಹರಣೆಗೆ ಬಾಬರ್, ಹುಮಾಯೂನ್ ಮತ್ತು ಅಕ್ಬರ್ ತಮ್ಮ ಧಾರ್ಮಿಕ ಹಬ್ಬಗಳಲ್ಲಿ ಗೋವುಗಳ ಬಲಿ ನಿಷೇಧಿಸಿದ್ದರು ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಇದ್ದಲ್ಲದೆ ಮೈಸೂರಿನ ಆಡಳಿತಗಾರ ಹೈದರ್ ಅಲಿ ಆಡಳಿತಾವಧಿಯಲ್ಲಿ ಕೂಡ ಗೋಹತ್ಯೆ ಶಿಕ್ಷಾರ್ಹ ಅಪರಾಧವಾಗಿತ್ತು. 

ಗೋವನ್ನು 'ರಾಷ್ಟ್ರೀಯ ಪ್ರಾಣಿ' ಎಂದು ಘೋಷಿಸಿ
ಒಂದು ದೇಶದ ಸಂಸ್ಕೃತಿ ಮತ್ತು ನಂಬಿಕೆಗೆ ಧಕ್ಕೆಯುಂಟಾದರೆ ದೇಶವು ದುರ್ಬಲವಾಗುತ್ತದೆ. ಆದ್ದರಿಂದ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು. ಗೋ ರಕ್ಷಣೆಯ ಹೆಸರಿನಲ್ಲಿ ಗೋವುಗಳಿಗೆ ಆಶ್ರಯ ಕಲ್ಪಿಸಿ ಹಣಗಳಿಕೆಯಲ್ಲಿ ತೊಡಗಿರುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಸರ್ಕಾರ ಕಾನೂನುಗಳನ್ನು ತರಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com