11 ನೇ ತರಗತಿಗೆ ಆಫ್ ಲೈನ್ ಪರೀಕ್ಷೆ: ಕೇರಳ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ತಡೆ
ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸೆಪ್ಟೆಂಬರ್ 6 ರಿಂದ ಆರಂಭವಾಗಲಿರುವ 11 ನೇ ತರಗತಿಯ ದೈಹಿಕ ಪರೀಕ್ಷೆಗಳನ್ನು ನಡೆಸುವ ಕೇರಳ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಒಂದು ವಾರದವರೆಗೆ ತಡೆ ನೀಡಿದೆ.
Published: 03rd September 2021 07:13 PM | Last Updated: 04th September 2021 02:34 AM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸೆಪ್ಟೆಂಬರ್ 6 ರಿಂದ ಆರಂಭವಾಗಲಿರುವ 11 ನೇ ತರಗತಿಯ ದೈಹಿಕ ಪರೀಕ್ಷೆಗಳನ್ನು ನಡೆಸುವ ಕೇರಳ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಒಂದು ವಾರದವರೆಗೆ ತಡೆ ನೀಡಿದೆ.
ಕೇರಳದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಪರಿಸ್ಥಿತಿ ಆತಂಕಕಾರಿಯಾಗಿದೆ. ದೇಶದ ಶೇ.70 ರಷ್ಟು ಪ್ರಕರಣಗಳು ಕೇರಳದಲ್ಲಿ ವರದಿಯಾಗುತ್ತಿದ್ದು, ಈ ವಯಸ್ಸಿನ ಮಕ್ಕಳು ಅಪಾಯಕ್ಕೆ ಸಿಲುಕಬಾರದು ಎಂದು ನ್ಯಾಯಾಲಯ ಹೇಳಿದೆ.
ಈ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಸಲು ಉದ್ದೇಶಿಸಿರುವ ದೈಹಿಕ ಪರೀಕ್ಷೆಯನ್ನು ನಡೆಸುವ ಮೊದಲು ರಾಜ್ಯ ಸರ್ಕಾರ ಪ್ರಚಲಿತ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅರ್ಜಿದಾರರು ಸಲ್ಲಿಸಿರುವ ಅರ್ಜಿಯಲ್ಲಿ ಮೇಲ್ನೊಟಕ್ಕೆ ಕಂಡುಬರುತ್ತದೆ. ಈ ಸಂಬಂಧ ಸರ್ಕಾರದ ಪರ ವಕೀಲರಿಂದ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ಬಂದಿಲ್ಲ, ಮುಂದಿನ ವಿಚಾರಣೆಯವರೆಗೂ ದೈಹಿಕ ಪರೀಕ್ಷೆ ನಡೆಸದಂತೆ ಮಧ್ಯಂತರ ಆದೇಶ ನೀಡುವುದಾಗಿ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ ಕರ್, ಹೃಷಿಕೇಶ್ ರಾಯ್ ಮತ್ತು ಸಿ. ಟಿ. ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.
ಈ ವಿಚಾರಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 13ಕ್ಕೆ ನ್ಯಾಯಪೀಠ ಮುಂದೂಡಿದೆ. ದೈಹಿಕ ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರದಲ್ಲಿ ಮಧ್ಯ ಪ್ರವೇಶಕ್ಕೆ ಹೈಕೋರ್ಟ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ವಕೀಲ ರಸೂಲ್ಶನ್ ನಲ್ಲಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಇದೀಗ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದೆ.