ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಸಚಿನ್ ವಾಜೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ
ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಸಮೀಪ ಸ್ಫೋಟಕ ಪತ್ತೆ ಮತ್ತು ಮನ್ಸುಖ್ ಹಿರೇನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹಾಗೂ ಇತರ ಆರೋಪಿಗಳ ವಿರುದ್ಧ ರಾಷ್ಟ್ರೀಯ...
Published: 03rd September 2021 05:48 PM | Last Updated: 03rd September 2021 06:45 PM | A+A A-

ಸಚಿನ್ ವಾಜೆ
ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಸಮೀಪ ಸ್ಫೋಟಕ ಪತ್ತೆ ಮತ್ತು ಮನ್ಸುಖ್ ಹಿರೇನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹಾಗೂ ಇತರ ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶುಕ್ರವಾರ ಚಾರ್ಜ್ ಶೀಟ್ ಸಲ್ಲಿಸಿದೆ.
ಕೇಂದ್ರ ತನಿಖಾ ಸಂಸ್ಥೆ ಇಂದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದು, ವಾಜೆ ಜೊತೆಗೆ, ಮಾಜಿ 'ಎನ್ಕೌಂಟರ್ ಸ್ಪೆಷಲಿಸ್ಟ್' ಪ್ರದೀಪ್ ಶರ್ಮಾ ಮತ್ತು ಇತರ ಕೆಲವು ಮಾಜಿ ಪೊಲೀಸ್ ಸಿಬ್ಬಂದಿಗಳು ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕಳೆದ ತಿಂಗಳು ನ್ಯಾಯಾಲಯ ನೀಡಿದ್ದ 30 ದಿನಗಳ ಗಡುವು ಅಂತ್ಯಕ್ಕೆ ಎರಡು ದಿನಗಳ ಮೊದಲು ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಎನ್ಐಎ ಪರ ವಕೀಲರು ತಿಳಿಸಿದ್ದಾರೆ.
ಇದನ್ನೂ ಓದಿ: ಸಚಿನ್ ವಾಜೆ ಬಾರ್ ಮಾಲೀಕರಿಂದ 4.7 ಕೋಟಿ ರೂ. ಸಂಗ್ರಹಿಸಿ ಅನಿಲ್ ದೇಶ್ ಮುಖ್ ಆಪ್ತ ಸಹಾಯಕನಿಗೆ ಹಸ್ತಾಂತರ-ಇಡಿ
ಫೆ. 25ರಂದು ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾಗಿತ್ತು. ಈ ಕುರಿತು ಪ್ರಕರಣದ ತನಿಖೆಯನ್ನು ಎನ್ಐಎ ನಡೆಸುತ್ತಿದೆ. ಸ್ಫೋಟಕ ತುಂಬಿದ್ದ ವಾಹನದಲ್ಲಿ ಬೆದರಿಕೆಯ ಪತ್ರವೂ ಇತ್ತು.
ಮುಕೇಶ್ ಅವರ ನಿವಾಸ ಆಂಟಿಲಿಯಾ ಬಳಿ ಪತ್ತೆಯಾಗಿದ್ದ ವಾಹನವು ಮನ್‌ಸುಖ್ ಹಿರೇನ್ ಅವರಿಗೆ ಸೇರಿದ್ದಾಗಿತ್ತು, ಈ ವಾಹನ ಕಳವಾಗಿದ್ದ ಕುರಿತು ಕೆಲವು ದಿನಗಳ ಹಿಂದೆಯಷ್ಟೇ ಹಿರೇನ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಮಾರ್ಚ್ 5ರಂದು ಹಿರೇನ್ ಅವರ ಶವವು ಠಾಣೆ ಸಮೀಪ ಪತ್ತೆಯಾಗಿತ್ತು.
ಗಂಡನ ಅನುಮಾನಾಸ್ಪದ ಸಾವಿನಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಪಾತ್ರವಿದೆಯೆಂದು ಆರೋಪಿಸಿ ಹಿರೇನ್ ಅವರ ಪತ್ನಿ ಅನುಮಾನ ವ್ಯಕ್ತಪಡಿಸಿದ್ದರು. ಈ ಕಾರಣಕ್ಕಾಗಿ ಸಚಿನ್ ಅವರನ್ನು ಮುಂಬೈ ಅಪರಾಧ ತನಿಖಾ ದಳದಿಂದ ಹೊರಗಿಡಲಾಗಿತ್ತು.