The New Indian Express
ಲಖನೌ: ಕೇಂದ್ರದ ನೂತನ ಕೃಷಿ ಕಾನೂನು ವಿರುದ್ಧ ಪ್ರತಿಭಟನಾರ್ಥ ಸೆಪ್ಟೆಂಬರ್ 5ರಂದು ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ರೈತರ ಮಹಾಪಂಚಾಯತ್ ಗೆ ಎಲ್ಲಾ ಸಿದ್ಧತೆಗಳು ಪೂರ್ಣವಾಗಿದೆ. ಪಂಚಾಯತ್ ಕಾರ್ಯಕ್ರಮವನ್ನು ಏನೇ ಅಡೆತಡೆ ಬಂದರೂ ನಿಲ್ಲಿಸುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯಿತ್ ಗುಡುಗಿದ್ದಾರೆ.
ಮುಂಬರಲಿರುವ ಚುನಾವಣಾ ಸಮಯದಲ್ಲಿ ಕೇಂದ್ರ ವಿರುದ್ಧ ಜನರನ್ನು ಒಗ್ಗಟ್ಟಾಗಿಸಲು ರೈತರ ಮಹಾಪಂಚಾಯತ್ ಕಾರ್ಯಕ್ರಮವನ್ನು ಬಳಸಿಕೊಳ್ಳುವುದಾಗಿ ರಾಕೇಶ್ ಟಿಕಾಯಿತ್ ತಿಳಿಸಿದ್ದಾರೆ.
ಸೆಪ್ಟೆಂಬರ್ 5, ಭಾನುವಾರ ನಡೆಯಲಿರುವ ಮಹಾಪಂಚಾಯತ್ ನಲ್ಲಿ 22 ರಾಜ್ಯಗಳ 300ಕ್ಕೂ ಹೆಚ್ಚು ರೈತ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಪಂಜಾಬ್ ರಾಜ್ಯವೊಂದರಿಂದಲೇ 2000 ರೈತರು ಮುಜಾಫರ್ ನಗರಕ್ಕೆ ಆಗಮಿಸುವ ವಿಶ್ವಾಸವನ್ನು ಟಿಕಾಯಿತ್ ವ್ಯಕ್ತಪಡಿಸಿದ್ದಾರೆ.
ಮಹಾಪಂಚಾಯತ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿವೆ. ರಾಪಿಡ್ ಆಕ್ಷನ್ ಫೋರ್ಸ್, 5 ಎಸ್ಎಸ್ಪಿ, 7 ಎಎಸ್ಪಿ 40 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಕಾರ್ಯಕ್ರಮವನ್ನು ವಿಡಿಯೋ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.