ಮೊದಲ ಡೋಸ್ ಪಡೆದ ನಾಲ್ಕು ವಾರ ನಂತರ ಕೋವಿಶೀಲ್ಡ್ 2ನೇ ಡೋಸ್ ಲಸಿಕೆಗೆ ಅವಕಾಶ ನೀಡಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ
ಮೊದಲ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದು ನಾಲ್ಕು ವಾರಗಳು ಕಳೆದ ಕೂಡಲೇ ಎರಡನೇ ಡೋಸ್ ಪಡೆಯಲು ಬಯಸುವವರಿಗೆ ಲಸಿಕೆ ನೀಡಬೇಕು, ಇದಕ್ಕೆ ಅನುಕೂಲವಾಗುವಂತೆ ಕೋವಿನ್ ಪೋರ್ಟಲ್ ನಲ್ಲಿ ಬದಲಾವಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.
Published: 06th September 2021 07:06 PM | Last Updated: 06th September 2021 07:32 PM | A+A A-

ಮಹಿಳೆಯೊಬ್ಬರಿಗೆ ಆರೋಗ್ಯ ಕಾರ್ಯಕರ್ತರು ಲಸಿಕೆ ನೀಡುತ್ತಿರುವ ಚಿತ್ರ
ಕೊಚ್ಚಿ: ಮೊದಲ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದು ನಾಲ್ಕು ವಾರಗಳು ಕಳೆದ ಕೂಡಲೇ ಎರಡನೇ ಡೋಸ್ ಪಡೆಯಲು ಬಯಸುವವರಿಗೆ ಲಸಿಕೆ ನೀಡಬೇಕು, ಇದಕ್ಕೆ ಅನುಕೂಲವಾಗುವಂತೆ ಕೋವಿನ್ ಪೋರ್ಟಲ್ ನಲ್ಲಿ ಬದಲಾವಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.
ವಿದೇಶಗಳಿಗೆ ತೆರಳುವವರಿಗೆ ಕೋವಿಡ್ ನಿಂದ ರಕ್ಷಣೆ ಪಡೆಯುವ ಸಲುವಾಗಿ ಬೇಗನೆ ಲಸಿಕೆ ಪಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮತಿ ನೀಡುವುದಾದರೆ ಅದೇ ಸೌಲಭ್ಯವನ್ನು ಉದ್ಯೋಗ ಅಥವಾ ಶಿಕ್ಷಣದ ಉದ್ದೇಶ ಹೊಂದಿದವರಿಗೆ ಯಾಕೆ ನೀಡಬಾರದು ಎಂದು ನ್ಯಾಯಾಧೀಶ ಪಿ. ಬಿ. ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಮಿಶ್ರಣ ಕುರಿತ ಅಧ್ಯಯನಕ್ಕೆ ಡಿಸಿಜಿಐ ಅಸ್ತು
ಕೇಂದ್ರ ಆರೋಗ್ಯ ಸಚಿವಾಲಯದ ನೀತಿಯ ಪ್ರಕಾರ, ಮುಂಚಿತವಾಗಿ ಲಸಿಕೆ ಪಡೆಯುವ ಆಯ್ಕೆಯನ್ನು ಜನರು ಹೊಂದಿದ್ದು, ಇದರ ಅನುಷ್ಠಾನಕ್ಕಾಗಿ ಖಾಸಗಿ ಆಸ್ಪತ್ರೆಗಳ ಮೂಲಕ ಪಾವತಿ ಆಧಾರದಲ್ಲಿಯೂ ಲಸಿಕೆ ವಿತರಿಸಲಾಗುತ್ತಿದೆ ಎಂಬುದನ್ನು ಹೈಕೋರ್ಟ್ ಸೆಪ್ಟೆಂಬರ್ ಮೂರರಂದು ನೀಡಿರುವ ಆದೇಶದಲ್ಲಿ ಉಲ್ಲೇಖಿಸಿದೆ.
84 ದಿನಗಳ ಬದಲಿಗೆ ನಾಲ್ಕು ವಾರ ಕಳೆದ ಕೂಡಲೇ ಉದ್ಯೋಗಿಗಳಿಗೆ ಕೋವಿಶೀಲ್ಡ್ ಎರಡನೇ ಲಸಿಕೆ ಡೋಸ್ ನೀಡಲು ಅನುಮತಿ ನೀಡಬೇಕೆಂದು ಕಿಟೆಕ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಕಂಪನಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಆದರೆ, ಕೇಂದ್ರ ಸರ್ಕಾರಕ್ಕೆ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.