ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಮಿಶ್ರಣ ಕುರಿತ ಅಧ್ಯಯನಕ್ಕೆ ಡಿಸಿಜಿಐ ಅಸ್ತು

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಮಿಶ್ರಣ ಕುರಿತ ಅಧ್ಯಯನಕ್ಕೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ (ಡಿಸಿಜಿಐ) ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ.
ಕೋವಿಶೀಲ್ಡ್ ಮತ್ತು ಕೋವಾಕ್ಸಿನ್
ಕೋವಿಶೀಲ್ಡ್ ಮತ್ತು ಕೋವಾಕ್ಸಿನ್

ನವದೆಹಲಿ: ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಮಿಶ್ರಣ ಕುರಿತ ಅಧ್ಯಯನಕ್ಕೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ (ಡಿಸಿಜಿಐ) ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ನೀತಿ ಆಯೋಗದ (ಆರೋಗ್ಯ ವಿಭಾಗ)ದ ಸದಸ್ಯ ಡಾ.ವಿ ಕೆ ಪೌಲ್ ಅವರು ಪತ್ರಿಕಾಗೋಷ್ಠಿ ಮಾಹಿತಿ ನೀಡಿದರು. 'ತಮಿಳುನಾಡಿನ ವೆಲ್ಲೂರಿನ ಸಿಎಮ್‌ಸಿ ಆಸ್ಪತ್ರೆಗೆ ಲಸಿಕೆಗಳ ಡೋಸ್‌ ಮಿಶ್ರಣ ಕುರಿತು ಅಧ್ಯಯನಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನ ತಜ್ಞರ ಸಮಿತಿಯು ಜುಲೈ 29 ರಂದು ಅಧ್ಯಯನ ನಡೆಸಲು ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು. ಈ ಅಧ್ಯಯನಕ್ಕಾಗಿ ಸುಮಾರು 300 ಮಂದಿ ಸ್ವಯಂ ಸೇವಕರನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. ಇನಾಕ್ಯುಲೇಷನ್ ಕೋರ್ಸ್ ಅನ್ನು ಪೂರ್ಣಗೊಳಿಸಲು ಒಬ್ಬ ವ್ಯಕ್ತಿಗೆ ಎರಡು ವಿಭಿನ್ನ ಲಸಿಕೆಗಳನ್ನು ನೀಡಬಹುದೇ ಎಂಬ ಬಗ್ಗೆ ಕಾರ್ಯಸಾಧ್ಯತೆಯನ್ನು ನಿರ್ಣಯಿಸುವುದು ಅಧ್ಯಯನದ ಗುರಿಯಾಗಿದೆ  ಎನ್ನಲಾಗಿದೆ. 

ಅಜಾಗರೂಕತೆಯಿಂದ ನೀಡಿದ್ದ ಎರಡು ಭಿನ್ನ ಲಸಿಕಾ ಡೋಸ್ ಗಳಿಂದ ಉತ್ತಮ ಫಲಿತಾಂಶ
ಇನ್ನು ಈ ಹಿಂದೆ ಪ್ರತ್ಯೇಕವಾಗಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) 98 ಜನರನ್ನು ಒಳಗೊಂಡ ಇತ್ತೀಚಿನ ಅಧ್ಯಯನವು, ಉತ್ತರಪ್ರದೇಶದಲ್ಲಿ 18 ಜನರಿಗೆ ಅಜಾಗರೂಕತೆಯಿಂದ ಕೋವಿಶೀಲ್ಡ್ ಅನ್ನು ಮೊದಲ ಡೋಸ್ ಆಗಿ ಮತ್ತು ಕೋವಾಕ್ಸಿನ್ ಅನ್ನು ಎರಡನೆಯದಾಗಿ ನೀಡಲಾಗಿತ್ತು. ಆದರೆ ಈ ಎರಡು ಕೋವಿಡ್ -19 ಲಸಿಕೆಗಳನ್ನು ಸಂಯೋಜಿಸಿರುವುದು ಒಂದೇ ಲಸಿಕೆಯ ಎರಡು ಡೋಸ್ ಗಳಿಂದ ಸಿಗುವ ರೋಗ ನಿರೋಧಕ ಸಾಮರ್ಥ್ಯಕ್ಕಿಂತ ಹೆಚ್ಚಿನ ಫಲಿತಾಂಶವನ್ನು ತೋರಿಸಿದೆ ಎನ್ನಲಾಗಿದೆ. 

ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಸಂಯೋಜನೆಯೊಂದಿಗೆ ರೋಗನಿರೋಧಕ ಸಾಮರ್ಥ್ಯ ಹೆಚ್ಚುವುದಲ್ಲದೆ ಇದು ಸುರಕ್ಷಿತವಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ ಮತ್ತು ಒಂದೇ ಲಸಿಕೆ ಡೋಸ್ ನಿಯಮಕ್ಕೆ ಹೋಲಿಸಿದಾಗ ಪ್ರತಿಕೂಲ ಪರಿಣಾಮಗಳು ಒಂದೇ ರೀತಿ ಕಂಡುಬರುತ್ತವೆ ಎನ್ನಲಾಗಿದೆ.

ಕಳೆದ ತಿಂಗಳು, ಭಾರತದ ಕೇಂದ್ರೀಯ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು (ಸಿಡಿಎಸ್‌ಸಿಒ) ವೆಲ್ಲೂರು ಸಂಸ್ಥೆಗೆ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್‌ ಲಸಿಕೆಗಳ ಮಿಶ್ರಣದ ವೈದ್ಯಕೀಯ ಪ್ರಯೋಗವನ್ನು ನಡೆಸಲು ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು. ಸಮಿತಿಯು ಭಾರತ್ ಬಯೋಟೆಕ್ ತನ್ನ ಕೋವ್ಯಾಕ್ಸಿನ್ ಮತ್ತು ಪ್ರಯೋಗದ ಹಂತದಲ್ಲಿರುವ ಅಡೆನೊವೈರಲ್ ಇಂಟ್ರಾನಾಸಲ್ ಲಸಿಕೆ ಡೋಸ್ BBV154ನ ಪರಸ್ಪರ ಬದಲಾವಣೆ ಕುರಿತು ಅಧ್ಯಯನ ನಡೆಸಲು ಅನುಮೋದನೆ ನೀಡಲು ಶಿಫಾರಸು ಮಾಡಿತ್ತು, ಆದರೆ, ಅಧ್ಯಯನದ ಶೀರ್ಷಿಕೆಯಿಂದ ‘ಇಂಟರ್ಚೇಂಜೆಬಿಲಿಟಿ’ ಪದವನ್ನು ತೆಗೆದುಹಾಕುವಂತೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಗೆ ಸೂಚಿಸಿದ್ದು, ಅನುಮೋದನೆಗಾಗಿ ಪರಿಷ್ಕೃತ ಪ್ರೋಟೊಕಾಲ್ ಅನ್ನು ಸಲ್ಲಿಸುವಂತೆ ತಿಳಿಸಿದೆ.

ಈ ಮೊದಲು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಧ್ಯಯನವು, ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಅನ್ನು ಕೋವಿಡ್ -19 ಲಸಿಕೆಗಳ ಮೊದಲ ಎರಡು ಡೋಸ್‌ಗಳಾಗಿ ಸಂಯೋಜಿಸುವುದರಿಂದ ಒಂದೇ ಲಸಿಕೆಯ ಎರಡು ಡೋಸ್‌ಗಳಿಗಿಂತ ‘ಉತ್ತಮ ಇಮ್ಯುನೊಜೆನಿಸಿಟಿ’ ಕಂಡುಬಂದಿದೆ ಎಂದು ಹೇಳಿತ್ತು.

ಆದರೆ, ವಿವಿಧ ಉತ್ಪಾದಕರಿಂದ ಪಡೆದ ಕೋವಿಡ್ -19 ಲಸಿಕೆಗಳನ್ನು ಬೆರೆಸುವುದರಿಂದ ಆಗುವ ಆರೋಗ್ಯದ ಪರಿಣಾಮದ ಬಗ್ಗೆ ಹೆಚ್ಚಿನ ಡೇಟಾ ಬೇಕಾಗಿರುವುದರಿಂದ ಇದು ‘ಅಪಾಯಕಾರಿ ಪ್ರವೃತ್ತಿ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com