ಅಶ್ಲೀಲ ಚಿತ್ರ ಪ್ರಕರಣ: ಬಾಲಿವುಟ್ ನಟಿ ಗೆಹನಾ ವಸಿಷ್ಠ ಜಾಮೀನು ಅರ್ಜಿ ವಜಾ, ಸುಪ್ರೀಂ ಮೆಟ್ಟಿಲೇರಲು ನಟಿ ಪರ ವಕೀಲರ ನಿರ್ಧಾರ
ಮುಂಬೈ: ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಬಾಲಿವುಟ್ ನಟಿ ಗೆಹನಾ ವಸಿಷ್ಠ ಅವರ ಜಾಮೀನು ಅರ್ಜಿಯನ್ನು ಬಾಂಬೇ ಹೈಕೋರ್ಟ್ ವಜಾಗೊಳಿಸಿದೆ.
ಇಂದು ಬಾಂಬೇ ಹೈಕೋರ್ಟ್ ನಲ್ಲಿ ನಡೆದ ಜಾಮೀನು ಅರ್ಜಿ ವಿಚಾರಣೆ ವೇಳೆ ಕೋರ್ಟ್ ನಟಿ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಹೀಗಾಗಿ ಆಕೆಯ ಪರ ವಕೀಲರು ಇದೀಗ ಸುಪ್ರೀಂ ಕೋರ್ಟ್ ನಲ್ಲಿ ಈ ಕುರಿತು ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಇನ್ನು ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವೆಬ್ ಸೈಟ್ ಗೆ ಅಪ್ಲೋಡ್ ಮಾಡುವ ಹಗರಣದಲ್ಲಿ ನಟಿ ಗೆಹನಾ ವಸಿಷ್ಠ್ ಅವರ ಹೆಸರು ಬಲವಾಗಿ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಮುಂಬೈ ಅಪರಾಧ ವಿಭಾಗದ ಮುಂಬಯಿ ಪ್ರಾಪರ್ಟಿ ಸೆಲ್ ಅವರನ್ನು ಬಂಧಿಸಿತ್ತು.
ತಮ್ಮ ಅಶ್ಲೀಲ ಚಿತ್ರದಲ್ಲಿ ನಟಿಸುವಂತೆ ಆ ಚಿತ್ರದ ನಿರ್ದೇಶಕಿ ಕೂಡ ಆಗಿದ್ದ ಗೆಹನಾ ವಸಿಷ್ಠ ಅವರು, ಮಹಿಳೆಯೋರ್ವರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ವಿಡಿಯೋವನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡಲಾಗುವುದು ಎಂದು ಹೇಳಿ ಮಹಿಳೆ ನಟಿಸುವಂತೆ ಮಾಡಿದ್ದ ಗೆಹನಾ ಬಳಿಕ ಅದನ್ನು ಎಡಿಟ್ ಮಾಡದೇ ಅಪ್ಲೋಡ್ ಮಾಡಿದ್ದಾರೆ ಎಂದು ಮಹಿಳೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಈಗಾಗಲೇ ಎಡಿಟ್ ಮಾಡದ ಹಲವು ಅಶ್ಲೀಲ ಚಿತ್ರಗಳನ್ನು ಗೆಹನಾ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮಿಸ್ ಏಷ್ಯಾ ಬಿಕಿನಿ ವಿಜೇತೆ ಕೂಡ ಆಗಿರುವ ಗೆಹನಾ ಆಲ್ಟ್ ಬಾಲಾಜಿ ವೆಬ್ ಸರಣಿ ಗಂದಿ ಬಾತ್ ನ ಮೂಲಕ ಹೆಸರುವಾಸಿಯಾಗಿದ್ದಾರೆ. ಇದರ ಹೊರತಾಗಿ, ಅವರು ಕೆಲವು ಹಿಂದಿ ಮತ್ತು ತೆಲುಗು ಚಲನಚಿತ್ರಗಳು ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ