14 ಕಿ.ಮೀ ಕಾಲ್ನಡಿಗೆಯಲ್ಲೇ ಸಾಗಿ ವೈಷ್ಣೋದೇವಿ ದರ್ಶನ ಪಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ!
ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಖ್ಯಾತ ಯಾತ್ರಾ ತಾಣ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಿದ್ದು, ಸುಮಾರು 14 ಕಿಮೀ ದೂರವನ್ನು ಕಾಲ್ನಡಿಗೆಯಲ್ಲೇ ಸಾಗಿ ಮಾತಾ ವೈಷ್ಣೋದೇವಿ ದರ್ಶನ ಪಡೆದಿದ್ದಾರೆ.
ಕಣಿವೆ ಪ್ರಾಂತ್ಯ ಜಮ್ಮುವಿನ ರಿಯಾಸಿ ಜಿಲ್ಲೆಯ ತ್ರಿಕುಟಾ ಬೆಟ್ಟದಲ್ಲಿರುವ ಹೆಸರಾಂತ ಯಾತ್ರಾ ಸ್ಥಳ ವೈಷ್ಣೋದೇವಿ ಗುಹೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಲ್ನಡಿಗೆಯಲ್ಲಿ ಸಾಗಿದ್ದಾರೆ. ಜಮ್ಮುವಿನ ಕಟ್ರಾದಿಂದ ಇಲ್ಲಿಗೆ ಸುಮಾರು 14 ಕಿ.ಮೀ ದೂರವಿದಲ್ಲಿರುವ ವೈಷ್ಣೋದೇವಿ ಗುಹೆಗೆ ಕಾಲ್ನಡಿಗೆಯಲ್ಲಿ ಸಾಗಿದ ರಾಹುಲ್ ಗಾಂಧಿ ಶುಕ್ರವಾರ ಬೆಳಗ್ಗೆ ದೇವಿಯ ದರ್ಶನ ಪಡೆದಿದ್ದಾರೆ.
ಪ್ರಯಾಣದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಹುಲ್, 'ನಾನು ವೈಷ್ಣೋಮಾತೆಗೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ. ಈ ಸಮಯದಲ್ಲಿ ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡಲು ಬಯಸುವುದಿಲ್ಲ' ಎಂದು ತಿಳಿಸಿದ್ದಾರೆ.
ಇನ್ನು ಈ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರಿಗೆ ಇತರೆ ಯಾತ್ರಾರ್ಥಿಗಳು, ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಭದ್ರತಾ ಸಿಬ್ಬಂದಿಗಳು ಸಾಥ್ ನೀಡಿದರು.
ರಾಹುಲ್ ಗಾಂಧಿ ಅವರು, 2 ದಿನಗಳ ಜಮ್ಮು ಪ್ರವಾಸದಲ್ಲಿದ್ದು, ಇದೇ ಹೊತ್ತಿನಲ್ಲೇ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ