ತಮಿಳುನಾಡು: ಮಳೆಯಿಂದ ಜಲಾವೃತಗೊಂಡ ರೈಲ್ವೆ ಸಬ್ ವೇಯಲ್ಲಿ ಕಾರು ಸಿಲುಕಿ ವೈದ್ಯ ಸಾವು
ಪುದುಕೊಟ್ಟೈ: ತಮಿಳುನಾಡಿನಲ್ಲಿ ದೋಷಯುಕ್ತ ಒಳಚರಂಡಿಯ ಪರಿಣಾಮ ಜಾಲಾವೃತ ರೈಲ್ವೆ ಸುರಂಗದಲ್ಲಿ ಸಿಲುಕಿ ವೈದ್ಯರೊಬ್ಬರು ಜೀವ ಕಳೆದುಕೊಂಡಿದ್ದಾರೆ.
ತುಡಿಯೂರು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಕಾರಿನಲ್ಲಿ ಸಂಚರಿಸುತ್ತಿದ್ದ ವೈದ್ಯರು ಜಲಾವೃತಗೊಂಡ ರೈಲ್ವೆ ಸುರಂಗ ದಾಟಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಪೂಮಾಡಿಮಲೈ ಹಾಗೂ ತುಡಿಯೂರು ನಡುವೆ ಈ ರೈಲ್ವೆ ಸುರಂಗ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು ನೂರಾರು ಮಂದಿ ಸಾರ್ವಜನಿಕರು ಈ ಭಾಗದಲ್ಲಿ ಸಂಚರಿಸುತ್ತಿರುತ್ತಾರೆ. 100 ಮೀಟರ್ ಉದ್ದವಿರುವ ಈ ಸುರಂಗವನ್ನು ಮಳೆಗಾಲದಲ್ಲಿ ದಾಟುವುದು ದು:ಸ್ವಪ್ನವೇ ಸರಿ!
ರೈಲ್ವೆ ಸುರಂಗದ ಒಳಭಾಗದಲ್ಲಿರುವ ಒಳಚರಂಡಿ ವ್ಯವಸ್ಥೆ ದೋಷಯುಕ್ತವಾಗಿದ್ದು, ಮಳೆ ಬಂದಲ್ಲಿ ತಕ್ಷಣ ನೀರು ಹೊರಹೋಗುವುದಿಲ್ಲ. ನೀರನ್ನು ಹೊರಹಾಕಬೇಕಾದರೆ ಪ್ರತಿ ಬಾರಿ ರೈಲ್ವೆ ಸಿಬ್ಬಂದಿ ಬಂದು ಪಂಪ್ ಸಹಾಯದಿಂದ ಹೊರಹಾಕಬೇಕಾದ ಪರಿಸ್ಥಿತಿ ಇದೆ.
ಈ ದೋಷಯುಕ್ತ ಒಳಚರಂಡಿ ವ್ಯವಸ್ಥೆ ಸೆ.17 ರಂದು ರಾತ್ರಿ ತಮ್ಮ ಅತ್ತೆಯೊಂದಿಗೆ ತುಡಿಯೂರು ಗ್ರಾಮಕ್ಕೆ ತೆರಳುತ್ತಿದ್ದ, ಕೃಷ್ಣಗಿರಿಯಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಸತ್ಯ ಅವರು ತಮ್ಮ ಮುಂದೆ ಲಾರಿಯೊಂದು ಸುರಂಗದಲ್ಲಿ ತೆರಳಿದ್ದನ್ನು ಕಂಡು ತಾವೂ ಸರಾಗವಾಗಿ ತೆರಳಬಹುದೆಂದುಕೊಂಡು ಸುರಂಗದ ಮೂಲಕ ಹಾದು ಹೋಗಲು ನಿರ್ಧರಿಸಿದರು. ಆದರೆ ಸುರಂಗದ ಮಧ್ಯ ಭಾಗಕ್ಕೆ ತೆರಳುತ್ತಿದ್ದಂತೆಯೇ ನೀರು ಆವರಿಸಿಕೊಂಡು ಕಾರಿನ ಇಂಜಿನ್ ಆಫ್ ಆಗಿ ಪ್ರತಿಯೊಂದೂ ಲಾಕ್ ಆಗಿದೆ, ಯಾವ ಪ್ರತಿಕ್ರಿಯೆ ನೀಡುವುದಕ್ಕೂ ಮುನ್ನವೇ 5 ಅಡಿಗಳಷ್ಟು ಜಲಾವೃತಗೊಂಡ ಸುರಂಗದಲ್ಲಿ ಮುಳುಗಿ ವೈದ್ಯ ಸಾವನ್ನಪ್ಪಿದ್ದಾರೆ. ಆದರೆ ಅವರೊಂದಿಗೆ ತೆರಳುತ್ತಿದ್ದ, ಹಿಂಬದಿಯಲ್ಲಿ ಕೂಳಿತಿದ್ದ ಮಹಿಳೆಯನ್ನು ಹಿಂಬದಿಯಲ್ಲಿ ಬಂದ ಲಾರಿಯಲ್ಲಿದ್ದ ವ್ಯಕ್ತಿಗಳು ಕಾರು ಅಪಾಯಕ್ಕೆ ಸಿಲುಕಿದ್ದನ್ನು ಕಂಡು ರಕ್ಷಿಸಿದ್ದಾರೆ.
ಇದಕ್ಕೂ ಮುನ್ನ ಆ ಮಹಿಳೆ ಹೇಗೋ ಕಾರಿನ ಕಿಟಕಿಯ ಮೂಲಕ ಸಹಾಯಕ್ಕಾಗಿ ಕೂಗಿದ್ದರು. ಆದರೆ ಕಾರಿನ ಸೀಟ್ ಬೆಲ್ಟ್ ಧರಿಸಿದ್ದ ಕಾರಣದಿಂದಾಗಿ ವೈದ್ಯರು ಕುಳಿತಿದ್ದ ಸೀಟ್ ನ ಕಿಟಕಿ ಲಾಕ್ ಆಗಿದ್ದರ ಪರಿಣಾಮ ಅವರಿಗೆ ಸೂಕ್ತ ಸಮಯದಲ್ಲಿ ಸಹಾಯ ಸಿಗಲಿಲ್ಲ. ವೈದ್ಯರನ್ನು ಮಹಿಳೆಯ ಜೊತೆಯೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗೆ ವೈದ್ಯ ಸತ್ಯ ಮೃತಪಟ್ಟಿದ್ದರೆಂದು ಸ್ಥಳೀಯ ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ.
ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಪುದುಕೊಟ್ಟೈ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ರೈಲ್ವೆ ಸುರಂಗದ ಪ್ರದೇಶದಲ್ಲಿರುವ ಸ್ಥಳೀಯರಿಗೆ ಆತಂಕವನ್ನುಂಟುಮಾಡಿದ್ದು, ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ