ಭಾರತ್ ಬಂದ್: ಪ್ರತಿಭಟನೆ ವೇಳೆ ಮೂವರು ರೈತರ ಸಾವು

ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ಇಂದು ನಡೆದ ಭಾರತ್ ಬಂದ್ ಆಚರಣೆ ವೇಳೆ ಪ್ರತಿಭಟನಾ ನಿರತ ಮೂವರು ರೈತರು ಸಾವನ್ಮಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸಿಂಗು ಗಡಿಯಲ್ಲಿ ರೈತರ ಪ್ರತಿಭಟನೆ
ಸಿಂಗು ಗಡಿಯಲ್ಲಿ ರೈತರ ಪ್ರತಿಭಟನೆ

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ಇಂದು ನಡೆದ ಭಾರತ್ ಬಂದ್ ಆಚರಣೆ ವೇಳೆ ಪ್ರತಿಭಟನಾ ನಿರತ ಮೂವರು ರೈತರು ಸಾವನ್ಮಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೃಷಿ ಕಾಯ್ದೆ ವಿರೋಧಿಸಿ ಹರಿಯಾಣ-ದೆಹಲಿ ನಡುವಿನ ಸಿಂಘು ಗಡಿಯಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪ್ರತಿಭಟನಾ ನಿರತ ರೈತನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿ-ಹರ್ಯಾಣದ ಸಿಂಗು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಓರ್ವ ರೈತ ಸಾವನ್ನಪ್ಪಿದ್ದು, ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪರಿಶೀಲನೆ ನಡೆಸಿ ಅವರ ಸಾವಿಗೆ ಹೃದಯಾಘಾತ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. 

ಮೃತರನ್ನು ಜಲಂಧರ್ ನ ಬಿಲ್ಗಾ ಗ್ರಾಮದ ಬಾಗೆಲ್ ರಾಮ್ (54) ಎಂದು ಗುರುತಿಸಲಾಗಿದ್ದು, ಅವರ ಪಾರ್ಥಿವ ಶರೀರವನ್ನು ಅವರ ಗ್ರಾಮಕ್ಕೆ ಕೊಂಡೊಯ್ಯಲಾಗಿದೆ. ನಾಳೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಪಂಜಾಬ್‌ನ ಕೀರ್ತಿ ಕಿಸಾನ್ ಯೂನಿಯನ್‌ನ ನಾಯಕ ಗುರ್ನಾಮ್ ಭಗದ್ ತಿಳಿಸಿದ್ದಾರೆ.

ಮತ್ತಿಬ್ಬರ ಸಾವು
ಇನ್ನು ಭಾರತ್ ಬಂದ್ ನಿಮಿತ್ತ ಸಿಂಗು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ರೈತರ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಎಸ್. ತಾರಾ ಸಿಂಗ್ ಎಂಬ ರೈತ ಸಾಮ್ರಾಲಾ ಟೋಲ್ ಪ್ಲಾಜಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬಲ್ಜಿಂದರ್ ಸಿಂಗ್ ಅವರು ಸಿಂಘು ಗಡಿಗೆ ಹೋಗುವ ದಾರಿಯಲ್ಲಿ ಸಂಭವಿಸಿದ ಮಾರಣಾಂತಿಕ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಜಿ ಸಚಿವೆ ಹರ್ಸೀಮ್ರತ್ ಕೌಲ್ ಬಾದಲ್ ಟ್ವೀಟ್ ಮಾಡಿದ್ದಾರೆ. 

ಅಂತೆಯೇ ಕೇಂದ್ರ ಸರ್ಕಾರದ ರೈತರ ಕುರಿತ ನಿರಾಸಕ್ತಿ ತೊಲಗಿಸಲು ಇನ್ನೂ ಎಷ್ಟು ಮಂದಿ ತಮ್ಮನ್ನು ತಾವು ತ್ಯಾಗ ಮಾಡುತ್ತಾರೆಯೋ? ಕೇಂದ್ರವು ತನ್ನ ಕೈಯಲ್ಲಿ ಅಮಾಯಕರ ರಕ್ತದ ಕಲೆಯನ್ನು ಹೊಂದಿದೆ ಎಂದು ಅವರು ಕಿಡಿಕಾರಿದ್ದಾರೆ.

ಏತನ್ಮಧ್ಯೆ, ರೈತರ ಸಮಸ್ಯೆಗಳನ್ನು ಚರ್ಚೆಯ ಮೂಲಕ ಪರಿಹರಿಸಬಹುದು. ಆದಾಗ್ಯೂ, ಇದಕ್ಕಾಗಿ ಯಾವುದೇ ಕಡೆಯಿಂದ ಯಾವುದೇ ಷರತ್ತುಗಳನ್ನು ವಿಧಿಸಬಾರದು. ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಂದ್ರ ಸಿಂಗ್ ಹೂಡಾ ಅವರು ಈ ಪ್ರಶ್ನೆಗಳಿಗೆ ಮುಕ್ತ ಚರ್ಚೆಯ ಮೂಲಕ ಉತ್ತರ ಹುಡುಕಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.

ಗಮನಾರ್ಹವಾಗಿ, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರೈತರ ಚಳುವಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರು ಹರಿಯಾಣದ ಬಹದ್ದೂರ್‌ ಗಡ್ ರೈಲ್ವೇ ನಿಲ್ದಾಣದ ಹಳಿಗಳ ಮೇಲೆ ಕ್ಯಾಂಪ್ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com