ನರೇಂದ್ರ ಗಿರಿ ಅವರ ಉತ್ತರಾಧಿಕಾರಿಯಾಗಿ ನೇಮಕಗೊಳ್ಳಲಿರುವ ಬಲ್ಬಿರ್ ಗಿರಿ
ಶ್ರೀ ಪಂಚಾಯತಿ ಅಖಾಡ ನಿರಂಜನಿ ಮಹಾಂತ ನರೇಂದ್ರ ಗಿರಿ ಅವರ ಉತ್ತರಾಧಿಕಾರಿಯನ್ನಾಗಿ ಬಲ್ಬಿರ್ ಗಿರಿ ಅವರನ್ನು ನೇಮಕ ಮಾಡಲು ನಿರ್ಧರಿಸಿದೆ. ಬಾಘಂಬರಿ ಗದ್ದಿಗೆ ಬಲ್ಬಿರ್ ಗಿರಿ ಅವರು ಉತ್ತರಾಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ.
Published: 28th September 2021 11:10 PM | Last Updated: 28th September 2021 11:10 PM | A+A A-

ಮಹಾಂತ್ ನರೇಂದ್ರ ಗಿರಿ
ಲಖನೌ: ಶ್ರೀ ಪಂಚಾಯತಿ ಅಖಾಡ ನಿರಂಜನಿ ಮಹಾಂತ ನರೇಂದ್ರ ಗಿರಿ ಅವರ ಉತ್ತರಾಧಿಕಾರಿಯನ್ನಾಗಿ ಬಲ್ಬಿರ್ ಗಿರಿ ಅವರನ್ನು ನೇಮಕ ಮಾಡಲು ನಿರ್ಧರಿಸಿದೆ. ಬಾಘಂಬರಿ ಗದ್ದಿಗೆ ಬಲ್ಬಿರ್ ಗಿರಿ ಅವರು ಉತ್ತರಾಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ.
ಅಖಿಲ ಭಾರತೀಯ ಅಖಾಡ ಪರಿಷತ್ (ಎಬಿಎಪಿ)ಯ ಅಧ್ಯಕ್ಷರೂ ಆಗಿದ್ದ ನರೇಂದ್ರ ಗಿರಿ ಅವರು ಸೆ.20 ರಂದು ತಮ್ಮ ಮಠದ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತ ದೇಹದ ಬಳಿ ಇದ್ದ ಪತ್ರದಲ್ಲಿ ತಮ್ಮ ಉತ್ತರಾಧಿಕಾರಿಯನ್ನಾಗಿ ಬಲ್ಬಿರ್ ಗಿರಿ ಅವರನ್ನು ನೇಮಕ ಮಾಡಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದರು. ಮೃತ ನರೇಂದ್ರ ಗಿರಿ ಅವರ 16 ನೇ ದಿನದ ಕ್ರಿಯೆಗಳ ದಿನದಂದು ಅ.5 ರಂದು ಬಲ್ಬಿರ್ ಗಿರಿ ಅವರ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ ಎಂದು ನಿರಂಜನಿ ಅಖಾಡ ತಿಳಿಸಿದೆ.
ಇದಕ್ಕೂ ಮುನ್ನ ಬಲ್ಬಿರ್ ಗಿರಿ, ಆಡಳಿತ ವಿಭಾಗವಾಗಿರುವ ಪಂಚ ಸದಸ್ಯರ (ಪಂಚ ಪರಮೇಶ್ವರ)ರಿಂದ ಅನುಮೋದನೆ ಪಡೆಯಬೇಕಾಗುತ್ತದೆ. 2020 ರ ಜೂ.04 ರಲ್ಲಿ ಮಹಾಂತ್ ನರೇಂದ್ರ ಗಿರಿ ಅವರು ಬಲ್ಬಿರ್ ಗಿರಿ ಅವರನ್ನು ನೇಮಕ ಮಾಡಬೇಕೆಂದು ವಿಲ್ ಬರೆದಿದ್ದರು. ಇದೇ ಆಶಯವನ್ನು ತಮ್ಮ ಕೊನೆಯ ಪತ್ರದಲ್ಲೂ ನರೇಂದ್ರ ಗಿರಿ ವ್ಯಕ್ತಪಡಿಸಿದ್ದರು.
ಮಹಾಂತ ನರೇಂದ್ರ ಗಿರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಒಪ್ಪಲು ಅಖಾಡ ಪರಿಷತ್ ನಿರಾಕರಿಸಿದೆ ಹಾಗೂ ಉತ್ತರಾಧಿಕಾರಿಯ ನೇಮಕದ ವಿಚಾರವಾಗಿ ಸೆ.25 ರಂದು ನಿರ್ಧರಿಸುವುದಾಗಿ ಅಖಾಡ ಪರಿಷತ್ ಹೇಳಿದೆ.