ಪಂಜಾಬ್ ಬಿಕ್ಕಟ್ಟು: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿ ಮಾಡಿದ ಮಾಜಿ ಸಿಎಂ ಕ್ಯಾ. ಅಮರಿಂದರ್ ಸಿಂಗ್
ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಗುರುವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ ಎಸ್ ಎ)ಅಜಿತ್ ದೋವಲ್ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
Published: 30th September 2021 01:05 PM | Last Updated: 30th September 2021 02:27 PM | A+A A-

ಕ್ಯಾ.ಅಮರಿಂದರ್ ಸಿಂಗ್(ಸಂಗ್ರಹ ಚಿತ್ರ)
ನವದೆಹಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಗುರುವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ ಎಸ್ ಎ) ಅಜಿತ್ ದೋವಲ್ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ದೆಹಲಿಯ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಚರ್ಚೆ ನಡೆಸಿ ಮೂರು ತಿದ್ದುಪಡಿ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂತೆಗೆದುಕೊಂಡು ಬಿಕ್ಕಟ್ಟನ್ನು ತಕ್ಷಣ ಬಗೆಹರಿಸುವಂತೆ ಕೇಳಿಕೊಂಡಿದ್ದರು.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ಅವರು ಹಠಾತ್ತನೆ ರಾಜೀನಾಮೆ ನೀಡಿರುವ ಸಂದರ್ಭದಲ್ಲಿ ಕ್ಯಾ. ಅಮರಿಂದರ್ ಸಿಂಗ್ ಅವರ ಈ ಭೇಟಿ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ಕಳೆದ ಸೆ.18ರಂದು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದ ಕ್ಯಾ.ಅಮರಿಂದರ್ ಸಿಂಗ್ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿ ಕಾಂಗ್ರೆಸ್ ನಾಯಕತ್ವದಿಂದ ನಿರಾಸೆಗೊಂಡು ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದರು. ನವಜೋತ್ ಸಿಂಗ್ ಸಿಧು ಅವರ ರಾಜೀನಾಮೆಗೆ ಪ್ರತಿಕ್ರಿಯಿಸಿದ್ದ ಅವರು, ಸಿಧು ಅವರು ಸ್ಥಿರ ಮನಸ್ಸಿನ ವ್ಯಕ್ತಿಯಲ್ಲ ಎಂದು ಸಹ ಟೀಕಿಸಿದ್ದರು.
ಮುಂಬರುವ ಪಂಜಾಬ್ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಕಠಿಣ ಸ್ಪರ್ಧೆ ನೀಡಲು ಮುಂದಾಗಿದ್ದು, ಕಾಂಗ್ರೆಸ್ ನಲ್ಲಿನ ಈ ಬೆಳವಣಿಗೆ, ಕ್ಯಾ.ಅಮರಿಂದರ್ ಸಿಂಗ್ ಅವರ ಭೇಟಿ ಹಲವು ಚರ್ಚೆ, ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬಿಜೆಪಿಗೆ ಪಂಜಾಬ್ ನಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಶಿರೋಮಣಿ ಅಕಾಲಿ ದಳ-ಬಿಎಸ್ ಪಿ ಮೈತ್ರಿಕೂಟದಿಂದ ಸಾಕಷ್ಟು ಸವಾಲುಗಳು, ಸ್ಪರ್ಧೆಯಿದೆ. ರಾಜ್ಯದಲ್ಲಿ ಹಿಂದೆ ಶಿರೋಮಣಿ ಅಕಾಲಿದಳ ಬಿಜೆಪಿಗೆ ನಂಬಿಕಸ್ಥ ಪಕ್ಷವಾಗಿತ್ತು,ಆದರೆ ಕೇಂದ್ರ ಸರ್ಕಾರ ಮೂರು ಕೃಷಿ ತಿದ್ದುಪಡಿ ಕಾಯ್ದೆ ತಂದ ಮೇಲೆ ಮೈತ್ರಿ ಮುರಿದುಬಿತ್ತು.
ಕ್ಯಾ.ಅಮರಿಂದರ್ ಸಿಂಗ್ ಅವರು ಬಿಜೆಪಿಗೆ ಸೇರ್ಪಡೆಯಾದರೆ ಪಂಜಾಬ್ ರಾಜ್ಯದ ರಾಜಕೀಯ ಪರಿಸ್ಥಿತಿ ಬದಲಾಗಬಹುದು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ವರವಾಗಬಹುದು. ಪ್ರಬಲ ಪೈಪೋಟಿ ನೀಡಲು ಸಾಧ್ಯವಿಲ್ಲದ ಪಕ್ಷ ಎಂದು ರಾಜ್ಯದಲ್ಲಿ ಹೇಳಿಸಿಕೊಂಡಿದ್ದ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಪ್ರಮುಖ ಪ್ರಬಲ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ.