ಪಶ್ಚಿಮ ಬಂಗಾಳ ಉಪ ಚುನಾವಣೆ: ಎಲ್ಲರ ಚಿತ್ತ ಭವಾನಿಪುರದತ್ತ; ಜಂಗೀಪುರ್, ಸಂಸರ್‌ಗಂಜ್‌ನಲ್ಲೂ ಮತದಾನ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಭವಿಷ್ಯ ನಿರ್ಧಾರವಾಗುವ ದಿನ ಇಂದು. ಗುರುವಾರ ಬೆಳಗ್ಗೆ 7 ಗಂಟೆಗೆ ಭವಾನಿಪುರ ಕ್ಷೇತ್ರದ ಉಪ ಚುನಾವಣೆಗೆ ಮತದಾನ ಆರಂಭವಾಗಿದ್ದು ತೀವ್ರ ಭದ್ರತೆ ನಡುವೆ ಮತದಾನ ಸಾಗುತ್ತಿದೆ.
Published: 30th September 2021 08:32 AM | Last Updated: 30th September 2021 02:25 PM | A+A A-

ಭವಾನಿಪುರ ಕ್ಷೇತ್ರದಲ್ಲಿ ನಡೆಯುತ್ತಿರುವ ಮತದಾನ
ಭವಾನಿಪುರ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಭವಿಷ್ಯ ನಿರ್ಧಾರವಾಗುವ ದಿನ ಇಂದು. ಗುರುವಾರ ಬೆಳಗ್ಗೆ 7 ಗಂಟೆಗೆ ಭವಾನಿಪುರ ಕ್ಷೇತ್ರದ ಉಪ ಚುನಾವಣೆಗೆ ಮತದಾನ ಆರಂಭವಾಗಿದ್ದು ತೀವ್ರ ಭದ್ರತೆ ನಡುವೆ ಮತದಾನ ಸಾಗುತ್ತಿದೆ.
ಜನರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇಂದು ಭವಾನಿಪುರ ಮಾತ್ರವಲ್ಲದೆ ಮುರ್ಶಿದಾಬಾದ್ ಜಿಲ್ಲೆಗಳ ಶಂಶೇರ್ಗಂಜ್ ಮತ್ತು ಜಂಗಿಪುರ್ ಕ್ಷೇತ್ರಗಳಿಗೆ ಸಹ ಉಪ ಚುನಾವಣೆ ನಡೆಯುತ್ತಿದೆ.
ಈವರೆಗೆ ಈ ಕ್ಷೇತ್ರದಲ್ಲಿ ಶಾಸಕಿಯಾಗದಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಬಾರಿ ನಿಂತಿದ್ದು ಅವರಿಗೆ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಸ್ಪರ್ಧೆ ಕುತೂಹಲ ಕೆರಳಿಸಿದೆ. ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿಯವರನ್ನು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಸೋಲಿಸಿ ಶಾಸಕರಾದರು.
ನಂತರ ಪಶ್ಚಿಮ ಬಂಗಾಳ ಕೃಷಿ ಸಚಿವ ಸೋಬಂದೇಬು ಚಟ್ಟೋಪಾಧ್ಯಾಯ ಅವರು ಕಳೆದ ಮೇ ತಿಂಗಳಲ್ಲಿ ಭವಾನಿಪುರ ಕ್ಷೇತ್ರವನ್ನು ಮಮತಾ ಬ್ಯಾನರ್ಜಿಯವರಿಗೆ ಬಿಟ್ಟುಕೊಟ್ಟರು, ಮುಖ್ಯಮಂತ್ರಿ ಪದವಿಯಲ್ಲಿ ಮುಂದುವರಿಯಲು ಚಟ್ಟೋಪಾಧ್ಯಾಯ ಈ ತ್ಯಾಗ ಮಾಡಿದ್ದರು.
ಇಂದಿನ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ 41 ವರ್ಷದ ಪ್ರಿಯಾಂಕ ತಿಬ್ರೆವಾಲ್ ಸ್ಪರ್ಧಿಸುತ್ತಿದ್ದಾರೆ. ವೃತ್ತಿಯಲ್ಲಿ ವಕೀಲೆಯಾಗಿರುವ ಪ್ರಿಯಾಂಕ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಯುವ ಮೋರ್ಚಾ ಉಪಾಧ್ಯಕ್ಷೆಯಾಗಿದ್ದಾರೆ. ಕಳೆದ ಬಾರಿ ಚುನಾವಣೆ ನಂತರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಹೈಕೋರ್ಟ್ ಗೆ ಅರ್ಜಿಯನ್ನು ಕೂಡ ಸಲ್ಲಿಸಿದ್ದರು. ಹೈಕೋರ್ಟ್ ಹಿಂಸಾಚಾರದ ಬಗ್ಗೆ ಸಿಬಿಐ ತನಿಖೆಗೆ ಆದೇಶ ನೀಡಿತ್ತು.
ಇಂದು ಮಾಧ್ಯಮಗಳ ಮುಂದೆ ಮಾತನಾಡಿರುವ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ತಿಬ್ರೆವಾಲ್, ನಾವು ನಿಸ್ಪಕ್ಷಪಾತವಾಗಿ ಚುನಾವಣೆ ನಡೆಯುತ್ತದೆ ಎಂದು ಭಾವಿಸಿದ್ದೇವೆ. ಭದ್ರತೆ ಬಹಳ ಮುಖ್ಯವಾಗುತ್ತದೆ. ರಾಜ್ಯ ಸರ್ಕಾರ ಭಯದಲ್ಲಿದೆ. ನಾನು ಮತಗಟ್ಟೆಗಳಿಗೆ ಭೇಟಿ ನೀಡುತ್ತೇನೆ ಎಂದರು.
ಟಿಎಂಸಿ ಶಾಸಕ ಮದನ್ ಮಿತ್ರ ಅವರ ಮೇಲೆ ಆರೋಪ ಮಾಡಿದ ಅವರು, ಮದನ್ ಮಿತ್ರ ಇಲ್ಲಿ ಉದ್ದೇಶಪೂರ್ವಕವಾಗಿ ವೋಟಿಂಗ್ ಮೆಶಿನ್ ನ್ನು ಮುಚ್ಚಿದ್ದಾರೆ, ಮತಗಟ್ಟೆಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಬೇಕೆಂದು ಅವರ ಆಶಯ ಎಂದು ಮತಗಟ್ಟೆ ಸಂಖ್ಯೆ 72ರ ಬಳಿ ಬಂದು ಆರೋಪ ಮಾಡಿದ್ದಾರೆ.
ಇಂದು ಸಾಯಂಕಾಲ 6.30ರವರೆಗೆ ಮತದಾನ ಮುಂದುವರಿಯಲಿದೆ.