ರಾಜ್ಯಸಭೆಯಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣ ಪ್ರತಿಧ್ವನಿ: ಮಲ್ಲಿಕಾರ್ಜುನ್ ಖರ್ಗೆ- ಪಿಯೂಶ್ ಗೋಯಲ್ ನಡುವೆ ವಾಗ್ವಾದ

ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಿಜೆಪಿ ನೇತೃತ್ದ ಸರ್ಕಾರವು ದುರುಪಯೋಗಪಡಿಸಿಕೊಂಡಿದೆ ಎಂಬ ಆರೋಪದ ಮೇಲೆ ಕಾಂಗ್ರೆಸ್ ಸದಸ್ಯರು ಕೋಲಾಹಲ ಎಬ್ಬಿಸಿದ್ದರಿಂದ ರಾಜ್ಯಸಭೆಯ ಕಲಾಪವನ್ನು ಗುರುವಾರ ಸುಮಾರು ಒಂದು ಗಂಟೆ ಅವಧಿಗೆ ಮುಂದೂಡಲಾಗಿತ್ತು.
ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ವಿರೋಧ ಪಕ್ಷಗಳ ಸದಸ್ಯರು
ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ವಿರೋಧ ಪಕ್ಷಗಳ ಸದಸ್ಯರು
Updated on

ನವದೆಹಲಿ: ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಿಜೆಪಿ ನೇತೃತ್ವದ ಸರ್ಕಾರವು ದುರುಪಯೋಗಪಡಿಸಿಕೊಂಡಿದೆ ಎಂಬ ಆರೋಪದ ಮೇಲೆ ಕಾಂಗ್ರೆಸ್ ಸದಸ್ಯರು ಕೋಲಾಹಲ ಎಬ್ಬಿಸಿದ್ದರಿಂದ ರಾಜ್ಯಸಭೆಯ ಕಲಾಪವನ್ನು ಗುರುವಾರ ಸುಮಾರು ಒಂದು ಗಂಟೆ ಅವಧಿಗೆ ಮುಂದೂಡಲಾಗಿತ್ತು.

ಪ್ರತಿಪಕ್ಷದ ನಾಯಕ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಸರ್ಕಾರ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿರುವ ಸಮನ್ಸ್ ಕುರಿತು ಮಾತನಾಡಿದ ಖರ್ಗೆ, ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗಲೇ ಅವರು ನನ್ನನ್ನು ಹೇಗೆ ಕರೆಯುತ್ತಾರೆ? 'ನಾನು ಮಧ್ಯಾಹ್ನ 12.30 ಕ್ಕೆ (ಇ.ಡಿ ಮುಂದೆ) ಹಾಜರಾಗಬೇಕು. ನಾನು ಕಾನೂನನ್ನು ಅನುಸರಿಸಲು ಬಯಸುತ್ತೇನೆ. ಆದರೆ ಈ ಸಮಯದಲ್ಲಿ ಸಂಸತ್ತಿನ ಅಧಿವೇಶನದ ಮಧ್ಯದಲ್ಲಿ ನನ್ನನ್ನು ಕರೆಯುವುದು ಸೂಕ್ತವೇ?' ಖರ್ಗೆ ಅವರು ಇಂದು ಬೆಳಗ್ಗೆ ರಾಜ್ಯಸಭೆಯಲ್ಲಿ ತಿಳಿಸಿದರು.

ದೇಶದಾದ್ಯಂತ ಸುದ್ದಿಮಾಡಿರುವ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಮುಳುವಾಗಿ ಪರಿಣಮಿಸಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್ ಕಟ್ಟಡದಲ್ಲಿರುವ ಯಂಗ್ ಇಂಡಿಯನ್ ಲಿಮಿಟೆಡ್ ಕಚೇರಿಗೆ ಜಾರಿ ನಿರ್ದೇಶನಾಲಯ ಬುಧವಾರ ಬೀಗ ಜಡಿದಿದೆ.

'ನಿನ್ನೆ ಪೊಲೀಸರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮನೆಗಳನ್ನು ಸುತ್ತುವರೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿ ಉಳಿಯುತ್ತದೆಯೇ ನಾವು ಸಂವಿಧಾನದ ಪ್ರಕಾರ ಕೆಲಸ ಮಾಡಲು ಸಾಧ್ಯವಾಗುತ್ತದೆಯೇ? ಇದಕ್ಕೆಲ್ಲ ನಾವು ಹೆದರುವುದಿಲ್ಲ. ನಾವು ಇದರ ವಿರುದ್ಧ ಹೋರಾಡುತ್ತೇವೆ' ಎಂದು ಅವರು ಹೇಳಿದರು.

ಆಡಳಿತಾರೂಢ ಬಿಜೆಪಿಯಿಂದ, ಸಭಾನಾಯಕ ಪಿಯೂಷ್ ಗೋಯಲ್ ಈ ಆರೋಪಗಳಿಗೆ ಪ್ರತಿಕ್ರಿಯಿಸಿ, 'ಯಾವುದೇ ಕಾನೂನು ಜಾರಿ ಸಂಸ್ಥೆಯ ಕೆಲಸದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಬಹುಶಃ ಅವರ (ಕಾಂಗ್ರೆಸ್) ಆಡಳಿತದಲ್ಲಿ ಆ ರೀತಿ ಆಗಿರಬಹುದು' ಎಂದು ವ್ಯಂಗ್ಯವಾಡಿದ ಅವರು, 'ಈಗ, ಯಾರಾದರೂ ಏನಾದರೂ ತಪ್ಪು ಮಾಡಿದರೆ, ಏಜೆನ್ಸಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತವೆ' ಎಂದು ಹೇಳಿದರು.

ಇದು ಉಭಯ ಪಕ್ಷಗಳ ನಾಯಕರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಖರ್ಗೆ ಅವರು ಕೋರಿರುವ ವಿಷಯದ ಕುರಿತು ಚರ್ಚೆಗೆ ಒಪ್ಪಿಗೆ ನೀಡಿಲ್ಲ ಎಂದು ತಿಳಿಸಿದ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.

ಎಎಪಿಯ ಸಂಜಯ್ ಸಿಂಗ್ ಮತ್ತು ಕಾಂಗ್ರೆಸ್‌ನ ದೀಪೇಂದರ್ ಸಿಂಗ್ ಹೂಡಾ ಅವರು ತಮ್ಮ ನೋಟಿಸ್‌ಗಳ ಮೂಲಕ ಸೇನೆಯ ನೇಮಕಾತಿ ಯೋಜನೆ ಅಗ್ನಿಪಥ್ ಕುರಿತು ಚರ್ಚೆಯನ್ನು ಬಯಸಿದ್ದರು. ಆದರೆ, ರಾಘವ್ ಚಡ್ಡಾ ಅವರು ಗುಜರಾತ್ ಮತ್ತು ಮಹಾರಾಷ್ಟ್ರದ ಬಂದರುಗಳಲ್ಲಿ ಡ್ರಗ್ ಸಾಗಣೆ ವಿಚಾರವನ್ನು ಪ್ರಸ್ತಾಪಿಸಲು ಪ್ರಯತ್ನಿಸಿದರು.

ಖರ್ಗೆ ಮತ್ತು ಅವರ ಪಕ್ಷದ ಕೆ.ಸಿ. ವೇಣುಗೋಪಾಲ್ ಅವರು, ರಾಜಕೀಯ ಸೇಡಿಗಾಗಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡ ಆರೋಪವನ್ನು ಪ್ರಸ್ತಾಪಿಸಲು ನಿಯಮ 267ರ ಅಡಿಯಲ್ಲಿ ನೋಟಿಸ್ ನೀಡಿದರು.

ಬಳಿಕ, ವೆಂಕಯ್ಯ ನಾಯ್ಡು ಅವರು, ಖರ್ಗೆ ಅವರು ಪ್ರಸ್ತಾಪಿಸಲು ಬಯಸಿದ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ಮಾಡಿಕೊಟ್ಟರು. ಖರ್ಗೆ ಅವರು ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆಯೇ ಬಿಜೆಪಿ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ ಏರ್ಪಟ್ಟಿತು. ನಂತರ ಸಭಾಪತಿಯವರು ಕಲಾಪವನ್ನು ಮುಂದೂಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com