ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಮಹಾರಾಷ್ಟ್ರ-ಕರ್ನಾಟಕ ನಡುವೆ ಸಾಮರಸ್ಯ ಬೆಳೆಯಬೇಕು: ಸಿಎಂ ಬೊಮ್ಮಾಯಿ

ಮಹಾರಾಷ್ಟ್ರ ಮತ್ತು ಕರ್ನಾಟಕದ ಸಂಬಂಧ ಬಹಳ ವರ್ಷಗಳದ್ದು. ನಮ್ಮ ಸಾಮರಸ್ಯ ಬೆಳೆಯಬೇಕು. ಮನಸ್ಸು ಒಂದಾದರೆ ಎಲ್ಲ ಸಾಧನೆ ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.
Published on

ಪುಣೆ: ಮಹಾರಾಷ್ಟ್ರ ಮತ್ತು ಕರ್ನಾಟಕದ ಸಂಬಂಧ ಬಹಳ ವರ್ಷಗಳದ್ದು. ನಮ್ಮ ಸಾಮರಸ್ಯ ಬೆಳೆಯಬೇಕು. ಮನಸ್ಸು ಒಂದಾದರೆ ಎಲ್ಲ ಸಾಧನೆ ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.

ಇಂದು ಪುಣೆಯಲ್ಲಿ ಬಂಟರ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ಭವನದ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಕಲ್ಪವೃಕ್ಷ ಶಕುಂತಲಾ ಜಗನ್ನಾಥ ಬಿ ಶೆಟ್ಟಿ ಅವರ ಸಮಾಜ ಕಲ್ಯಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ಇಲ್ಲಿ ಕನ್ನಡಿಗರು ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಶಿವಾಜಿ ಮಹಾರಾಜರನ್ನು ಅತ್ಯಂತ ಗೌರವದಿಂದ ಕಾಣುವ ರಾಜ್ಯ. ಅದೇ ರೀತಿ ಕನ್ನಡಿಗರ ಬಗ್ಗೆ ಗೌರವವಿರುವ ರಾಜ್ಯ. ನಿಮ್ಮ ಸಂಬಂಧ ಕನ್ನಡದ ಸಂಸ್ಕೃತಿ, ಭಾವನೆ, ಬೆಳವಣಿಗೆಗೆ ನಿರಂತರವಾಗಿ ಇರಲಿ. ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಕೆಲಸವಾಗಲಿ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.

ಅಮೃತ ಕಾಲಕ್ಕೆ ಭದ್ರಬುನಾದಿ
ಈ ವರ್ಷ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ದೇಶಭಕ್ತಿಯನ್ನು ಪುನರುಜ್ಜೀವನಗೊಳಿಸಲು ಹರ್ ಘರ್ ತಿರಂಗಾ ಅಭಿಯಾನ ಪ್ರಾರಂಭಿಸಿದ್ದಾರೆ. ಕರ್ನಾಟಕದಲ್ಲಿ 1 ಕೋಟಿ 25 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಇಡೀ ದೇಶದ ತುಂಬಾ ದೇಶಭಕ್ತಿಯ ಬಗ್ಗೆ ಜಾಗೃತಿ ಮೂಡುತ್ತಿದೆ. ಇದರ ಅವಶ್ಯಕತೆ ಇದೆ. ದೇಶದ ಏಕತೆ, ಅಖಂಡತೆ ಇದ್ದಾಗ ಮಾತ್ರ ದೇಶ ಕಟ್ಟಲು ಸಾಧ್ಯ. ದೇಶ ಮೊದಲು ಎನ್ನುವ ಭಾವ ಇದ್ದ ದೇಶಕ್ಕೆ ಸೋಲು ಎನ್ನುವುದು ಇರುವುದಿಲ್ಲ. ಭಾರತದ 130 ಕೋಟಿ ಜನ ಸಂಖ್ಯೆ ಎದ್ದು ನಿಂತರೇ ಇಡೀ ಜಗತ್ತೇ ಅಲ್ಲಾಡಿಬಿಡುತ್ತದೆ ಎಂದರು.

ಅಮೃತ ಘಳಿಗೆ
ಭಾರತಕ್ಕೆ 2047ಕ್ಕೆ 100 ವರ್ಷಗಳಾಗುತ್ತದೆ. ಈ 25 ವರ್ಷ ಗಳನ್ನು ಅಮೃತ ಕಾಲ ಎಂದು ಘೋಷಿಸಲಾಗಿದೆ. ಅಮೃತ ಘಳಿಗೆ ಎಂದರೆ ದೇವರ ಇಚ್ಛೆ, ಮನುಷ್ಯರ ಶ್ರಮ ಕೂಡುವ ಘಳಿಗೆ. ಅಂಥ ಕಾಲ ಭಾರತದ ದೇಶಕ್ಕೆ ಬಂದಿದೆ. ನಾವು ಈ ಕಾಲದಲ್ಲಿರುವುದು ನಮ ಭಾಗ್ಯ. ಈ ವರ್ಷ ನಾವು ಅದಕ್ಕೆ ಹಾಕುವ ಭದ್ರ ಬುನಾದಿ 25 ವರ್ಷ ಭಾರತವನ್ನು ಸಶಕ್ತ, ಸಂಪದ್ಭರಿತ ರಾಜ್ಯವನ್ನಾಗಿಸಿ, ನಂಬರ್ ಒನ್ ರಾಷ್ಟ್ರವಾಗಿಸಲಿದೆ. ಬಂಟರ ಸಮಾಜಕ್ಕೆ ದೇಶ ಭಕ್ತಿ ಕಲಿಸುವ ಅವಶ್ಯಕತೆ ಇಲ್ಲ. ನಿಮ್ಮ ನಾಯಕತ್ವವೂ ಬಹಳ ಮುಖ್ಯ. ದೇಶ, ದೇಶ ಭಕ್ತಿಯ ಬಗ್ಗೆ ನಾಯಕತ್ವ ವಹಿಸುಬೇಕು ಎಂದರು.

ಸರ್ಕಾರದ ನೆರವು
21ನೇ ಶತಮಾನ ಜ್ಞಾನದ ಕಾಲ. ಮುಂದಿನ ಪೀಳಿಗೆ ಜ್ಞಾನ ಪಡೆಯಬೇಕು. ಜ್ಞಾನದಲ್ಲಿಯೂ ಬಂಟರು ಕಡಿಮೆ ಇಲ್ಲ. ಬಂಟರ ಸಮಾಜಕ್ಕೆ ಕೀರ್ತಿ, ಕಿರೀಟ ಸಿಗುತ್ತದೆ. ನಿಮ್ಮ ಸಂಘದ ಚಟುವಟಿಕೆಗಳಿಗೆ ಸರ್ಕಾರದ ವತಿಯಿಂದ ಸಂಘಕ್ಕೆ ಅಗತ್ಯವಿರುವ ಸಹಾಯ ಸಹಕಾರವನ್ನು ನೀಡಲಾಗುವುದು. ಪಾಂಡರಾಪುರಕ್ಕೆ ಈ ವರ್ಷ 5 ಕೋಟಿ ರೂ.ಗಳನ್ನು ನೀಡಿ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ. ಕನ್ನಡಿಗರು ಹೋಗುವ ಕಡೆಗಳಲ್ಲಿ ಸಹಾಯ ಹಸ್ತ ಚಾಚುತ್ತಿದ್ದೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com