ಬಿಹಾರ: ಸರ್ಕಾರಿ ಸಭೆಯಲ್ಲಿ ಲಾಲೂ ಹಿರಿಯ ಅಳಿಯ ಭಾಗಿ, ವಿವಾದಕ್ಕೆ ಸಿಲುಕಿದ ತೇಜ್ ಪ್ರತಾಪ್!
ಪಾಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಪುತ್ರ ಹಾಗೂ ಬಿಹಾರದ ಪರಿಸರ ಮತ್ತು ಅರಣ್ಯ ಸಚಿವ ತೇಜ್ ಪ್ರತಾಪ್ ಯಾದವ್ ಅವರು ಸರ್ಕಾರಿ ಸಭೆಯಲ್ಲಿ ಅವರ ಸೋದರ ಮಾವ ಶೈಲೇಶ್ ಕುಮಾರ್ ಭಾಗಿಯಾಗಿರುವ ಚಿತ್ರ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿದೆ.
ಶೈಲೇಶ್ ಅವರು ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರಿ ಮಿಸಾ ಭಾರತಿ ಅವರ ಪತಿಯಾಗಿದ್ದು, ಅವರು ರಾಜ್ಯಸಭಾ ಸದಸ್ಯರೂ ಆಗಿದ್ದಾರೆ.
ತೇಜ್ ಪ್ರತಾಪ್ ಅವರು ಬಿಹಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ(ಬಿಎಸ್‌ಪಿಸಿಬಿ) ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾಗ ಶೈಲೇಶ್ ಬಿಎಸ್‌ಪಿಸಿಬಿ ಅಧ್ಯಕ್ಷರ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ.
ಈ ಸಭೆಯ ವೀಡಿಯೋ ಮತ್ತು ಚಿತ್ರ ಹೊರಬೀಳುತ್ತಿದ್ದಂತೆಯೇ ವಿವಾದ ತಾರಕಕ್ಕೇರಿದೆ. ಬಿಹಾರ ಸರ್ಕಾರದಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಸರ್ಕಾರ ಆರಂಭವಾಗಿರುವ ಲಕ್ಷಣ ಇದಾಗಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿವೆ. ಸರ್ಕಾರಿ ಸಭೆಯಲ್ಲಿ ಲಾಲೂ ಪ್ರಸಾದ್ ಅವರ ಅಳಿಯ ಭಾಗವಹಿಸಿದ್ದಲ್ಲದೆ, ಅಧಿಕಾರಿಗಳಿಗೆ ಪ್ರಶ್ನೆ ಮಾಡುವ ಅಧಿಕಾರ ಏನಿದೆ ಎಂದು ವಿರೋಧ ಪಕ್ಷಗಳು ಪ್ರಶ್ನೆ ಮಾಡಿವೆ.
ತೇಜ್ ಪ್ರತಾಪ್ ಯಾದವ್ ಅವರು ತಮ್ಮ ಭಾವ ಶೈಲೇಶ್ ಕುಮಾರ್ ಅವರನ್ನು ಆಪ್ತ ಕಾರ್ಯದರ್ಶಿಯನ್ನಾಗಿ ಇಟ್ಟುಕೊಂಡಿದ್ದರೆ ಮಾತ್ರವೇ ಅವರು ಈ ಸಭೆಗೆ ಹಾಜರಾಗಬಹುದು. ಆದರೆ, ಅವರನ್ನು ಆಪ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವ ಬಗ್ಗೆ ಈವರೆಗೂ ಯಾವುದೇ ಮಾಹಿತಿಯನ್ನು ಸರ್ಕಾರ ನೀಡಿಲ್ಲ ಎಂದು ಬಿಜೆಪಿ ಕಿಡಿಕಾರಿದೆ.
ತೇಜ್ ಪ್ರತಾಪ್ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯ ಬಿಜೆಪಿ ವಕ್ತಾರ ನಿಖಿಲ್ ಆನಂದ್, ಆರ್‌ಜೆಡಿ ಕುಟುಂಬದ ಪಕ್ಷ. ಕುಟುಂಬದ ಸ್ವಾರ್ಥಿ ಹಿತಾಸಕ್ತಿಗಳನ್ನು ಪೂರೈಸುವುದು ಅದರ ಪ್ರಧಾನ ಕರ್ತವ್ಯವಾಗಿದೆ. ಶೈಲೇಶ್ ಭಾಯ್ ಅವರ ಆಶೀರ್ವಾದ ಮುಂದುವರಿದರೆ ತೇಜ್ ಪ್ರತಾಪ್ ಅತ್ಯುತ್ತಮ ಮಂತ್ರಿ ಎಂದು ಸಾಬೀತುಪಡಿಸುತ್ತಾರೆ ಎಂದು ಹೇಳಿದ್ದಾರೆ.
ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟವು 2025 ಮತ್ತು 2017 ರಿಂದ ಅಧಿಕಾರದಲ್ಲಿದ್ದಾಗ ಆರೋಗ್ಯ ಸಚಿವರಾಗಿದ್ದ ತೇಜ್ ಪ್ರತಾಪ್ ಅವರು ತಮ್ಮ 'ಸಾಂಪ್ರದಾಯಿಕ' ವಿಧಾನಗಳಿಂದ ಹೆಸರುವಾಸಿಯಾಗಿದ್ದಾರೆ.

