ಕಾಂಗ್ರೆಸ್ ನಾಯಕತ್ವದ ಬಿಕ್ಕಟ್ಟು: ಮೋದಿ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಹೋರಾಡಲು ಸಿದ್ಧ ಎಂದ ರಾಹುಲ್ ಗಾಂಧಿ

ನನ್ನೊಂದಿಗೆ ಯಾರೂ ನಿಲ್ಲದಿದ್ದರೂ ಸರಿ ಮೋದಿ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಹೋರಾಡಲು ಸಿದ್ಧ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಕಾಂಗ್ರೆಸ್ ನಾಯಕತ್ವದ ಬಿಕ್ಕಟ್ಟು: ಮೋದಿ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಹೋರಾಡಲು ಸಿದ್ಧ ಎಂದ ರಾಹುಲ್ ಗಾಂಧಿ

ನವದೆಹಲಿ: ಪಕ್ಷದ ಹಿರಿಯ ನಾಯಕರು ಮತ್ತು ಜಿ23 ಗುಂಪಿನ ಸದಸ್ಯರಾದ ಗುಲಾಂ ನಬಿ ಆಜಾದ್ ಮತ್ತು ಆನಂದ್ ಶರ್ಮಾ ಅವರು ಪ್ರಮುಖ ಸ್ಥಾನಗಳಿಗೆ ರಾಜೀನಾಮೆ ನೀಡುವುದರೊಂದಿಗೆ ಪಕ್ಷದಲ್ಲಿ ಸಮಸ್ಯೆ ಮುಂದುವರಿದಿದೆ. ಇದೇ ಬೆನ್ನಲ್ಲೇ, ನನ್ನೊಂದಿಗೆ ಯಾರೂ ನಿಲ್ಲದಿದ್ದರೂ ಸರಿ ಮೋದಿ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಹೋರಾಡಲು ಸಿದ್ಧ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.

150 ಕ್ಕೂ ಹೆಚ್ಚು ನಾಗರಿಕ ಸಮಾಜದ ಸಂಘಟನೆಗಳು, ಚಳವಳಿಗಳು, ವೃತ್ತಿಪರರು ಮತ್ತು ಒಕ್ಕೂಟಗಳು ಭಾಗವಹಿಸಿದ್ದ ‘ಭಾರತ್ ಜೋಡೋ ಯಾತ್ರೆ’ ಕುರಿತ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಗುವ 3500 ಕಿ.ಮೀ ಪಾದಯಾತ್ರೆಗೆ ಬೆಂಬಲ ಮತ್ತು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಅರುಣಾ ರಾಯ್, ಸೈಯದ್ ಹಮೀದ್, ಶರದ್ ಬೆಹರ್, ಪಿ.ವಿ. ರಾಜಗೋಪಾಲ್, ಬೆಜವಾಡ ವಿಲ್ಸನ್, ದೇವನೂರ ಮಹಾದೇವ, ಜಿ.ಎನ್. ದೇವಿ ಮತ್ತು ಯೋಗೇಂದ್ರ ಯಾದವ್ ಸೇರಿದಂತೆ ನಾಗರಿಕ ಸಮಾಜದ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ಹೋರಾಟದಲ್ಲಿ ಯಾರೇ ಬೆಂಬಲ ನೀಡಿದರೂ ಕೂಡ ಜನಸಂಬಂಧಿತ ಸಮಸ್ಯೆಗಳನ್ನು ಮಾತ್ರ ಮುಂದಿಡಲು ಸಿದ್ಧ ಎಂದು ರಾಹುಲ್ ಸಭೆಗೆ ತಿಳಿಸಿದರು.

ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಮಾತನಾಡಿ, ಇದು ಪ್ರಶ್ನೋತ್ತರ ಅವಧಿಯಾಗಿದ್ದು, ನಾಗರಿಕ ಸಮಾಜದ ಸದಸ್ಯರು ಪ್ರಸ್ತಾಪಿಸಿದ ಸಮಸ್ಯೆಗಳಿಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಅವರು ಪಾದಯಾತ್ರೆಯ ಮೂರು ಮೂಲಭೂತ ಸ್ತಂಭಗಳಾದ ಗಂಭೀರ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸವಾಲುಗಳನ್ನು ಗುರುತಿಸಿದ್ದಾರೆ ಎಂದರು.

ಹಣದುಬ್ಬರ, ನಿರುದ್ಯೋಗ ಮತ್ತು ಆರ್ಥಿಕ ಸಂಪತ್ತಿನ ಕೇಂದ್ರೀಕರಣ, ಹೆಚ್ಚುತ್ತಿರುವ ಪ್ರಾದೇಶಿಕ ಅಸಮಾನತೆ, ಧರ್ಮ, ಜಾತಿ, ಉಡುಗೆ, ಆಹಾರ, ಭಾಷೆಯ ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ಸವಾಲುಗಳ ಕಾರಣದಿಂದ ನಾವು ಗಂಭೀರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಕೇಂದ್ರದ ತನಿಖಾ ಸಂಸ್ಥೆಗಳ ದುರುಪಯೋಗದಿಂದ ರಾಜಕೀಯ ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂದು ರಮೇಶ್ ಹೇಳಿದರು.

ಕಾಂಗ್ರೆಸ್ ಕಳೆದ ವಾರ ಸೆಪ್ಟೆಂಬರ್ 7 ರಂದು 'ಭಾರತ್ ಜೋಡೋ ಯಾತ್ರೆ' ಪ್ರಾರಂಭಿಸುವುದಾಗಿ ಘೋಷಿಸಿತ್ತು. ಅಲ್ಲದೆ, ಕಳೆದ ಶತಮಾನದಲ್ಲಿ ಈ ದೇಶದಲ್ಲಿ ನಡೆಯುತ್ತಿರುವ ಅತಿ ಉದ್ದದ ಯಾತ್ರೆ ಎಂದು ಪಕ್ಷವು ಬಿಂಬಿಸಿದೆ.

ಇಲ್ಲಿನ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ 'ಭಾರತ್ ಜೋಡೋ ಯಾತ್ರಾ ಕಾನ್‌ಕ್ಲೇವ್‌'ನಲ್ಲಿ ನಾಗರಿಕ ಸಮಾಜದ ಸದಸ್ಯರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಈ ಯಾತ್ರೆಯು ನನಗೆ 'ತಪಸ್ಸಿ'ನಂತೆ ಎಂದು ಹೇಳಿದ ಅವರು, 'ಭಾರತವನ್ನು (ಭಾರತ್ ಜೋಡೋ) ಒಗ್ಗೂಡಿಸುವುದು ದೀರ್ಘ ಯುದ್ಧವಾಗಲಿದೆ ಎಂಬುದು ನನಗೆ ತಿಳಿದಿದೆ ಮತ್ತು ನಾನು ಅದಕ್ಕೆ ಸಿದ್ಧನಿದ್ದೇನೆ' ಎಂದು ಹೇಳಿದರು.

'ದೇಶದ ರಾಜಕೀಯವು ಧ್ರುವೀಕರಣಗೊಂಡಿದ್ದು, ಒಂದು ಕಡೆ ಸಂಘದ ಸಿದ್ಧಾಂತ ಮತ್ತು ಇನ್ನೊಂದು ಬದಿಯಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಸಿದ್ಧಾಂತವಿದೆ ಎಂಬುದನ್ನು ಹೇಳುವುದೇ ಯಾತ್ರೆಯ ಗುರಿಯಾಗಿದೆ. 'ದೇಶದ ಜನರು ಒಗ್ಗೂಡುವ ರಾಜಕೀಯವನ್ನು ಬಯಸುತ್ತಾರೆ ಎಂಬ ನಂಬಿಕೆಯೊಂದಿಗೆ ನಾವು ಈ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇವೆ ಹೊರತು ವಿಭಜಿಸುವುದಲ್ಲ'' ಎಂದು ಅವರು ಹೇಳಿದರು.

ಈ ಯಾತ್ರೆಯಲ್ಲಿ ಯಾರೂ ನಮ್ಮೊಂದಿಗೆ ನಡೆಯುತ್ತಾರೋ, ಇಲ್ಲವೋ ಎಂಬುದು ಮುಖ್ಯವಲ್ಲ. ಬದಲಿಗೆ ಯಾರೊಬ್ಬರೂ ತಮ್ಮೊಂದಿಗೆ ನಿಲ್ಲದಿದ್ದರೂ ಕೂಡ ಒಬ್ಬನೇ ನಡೆಯುತ್ತೇನೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com