ಗುಜರಾತ್ ಫಲಿತಾಂಶ: ವಡ್ಗಾಮ್ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಮತ್ತೆ ಗೆಲುವು
ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದೆ. ಆದರೆ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿಗ್ನೇಶ್ ಮೇವಾನಿ ಅವರು ಮತ್ತೆ ಗೆಲುವು ಸಾಧಿಸುವ ಮೂಲಕ ತಮ್ಮ ವಡ್ಗಾಮ್ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.
ರಾಜ್ಯದ ಪ್ರಮುಖ ದಲಿತ ನಾಯಕರಲ್ಲಿ ಒಬ್ಬರಾಗಿರುವ ಮೇವಾನಿ ಅವರು 2017 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಶಾಸಕರಾಗಿ ವಡ್ಗಾಮ್ ಕ್ಷೇತ್ರದಲ್ಲಿ ಗೆದ್ದಿದ್ದರು. ಮೇವಾನಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅವರಿಗೆ ಬೆಂಬಲ ನೀಡಿತ್ತು. ನಂತರ ಕಾಂಗ್ರೆಸ್ ಸೇರಿದ್ದರು.
ವಡ್ಗಾಮ್ ಪರಿಶಿಷ್ಟ ಜಾತಿಗೆ(SCs) ಮೀಸಲಾದ ಸ್ಥಾನವಾಗಿದ್ದು, ಮುಸ್ಲಿಂ ಮತದಾರರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಈ ಕ್ಷೇತ್ರದಲ್ಲಿ ಸುಮಾರು 90,000 ಮುಸ್ಲಿಂ ಮತದಾರರಿದ್ದಾರೆ. ವಡ್ಗಾಮ್‌ನ 2.94 ಲಕ್ಷ ಮತದಾರರಲ್ಲಿ ಮೂರನೇ ಒಂದು ಭಾಗದಷ್ಟು ಮುಸ್ಲಿಂ ಮತದಾರರಿದ್ದಾರೆ. ಸುಮಾರು 44,000 ದಲಿತ ಮತದಾರರು ಮತ್ತು 15,000 ರಜಪೂತರು ಇದ್ದಾರೆ.
ಗುಜರಾತ್ ನಲ್ಲಿ ಆಡಳಿತಾರೂಢ ಬಿಜೆಪಿ 182 ಸ್ಥಾನಗಳಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದು ಪಕ್ಷಕ್ಕೆ ಮಾತ್ರವಲ್ಲ, ರಾಜ್ಯಕ್ಕೆ ದಾಖಲೆಯ ಗೆಲುವು ಆಗಿದೆ. ಈ ಹಿಂದೆ 1985 ರಲ್ಲಿ 149 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ದಾಖಲೆಯನ್ನು ಬಿಜೆಪಿ ಮುರಿದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ