ಎಲ್ಲವೂ ಸರಾಗವಾಗಿ ಬಗೆಹರಿಯಲಿದೆ: ಗೆಹ್ಲೋಟ್-ಪೈಲಟ್ ವಿಷಯದ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್
ಜೈಪುರ: ರಾಜಸ್ಥಾನದಲ್ಲಿ ಸಿಎಂ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ತಿಕ್ಕಾಟ ಕಾಂಗ್ರೆಸ್ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ.
ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಪ್ರತಿಕ್ರಿಯೆ ನೀಡಿದ್ದು, ಎಲ್ಲವೂ ಸರಾಗವಾಗಿ ಬಗೆಹರಿಯಲಿದೆ, ರಾಜ್ಯದಲ್ಲಿ ಪಕ್ಷ ಒಗ್ಗಟ್ಟಿನಿಂದ ಇದೆ ಎಂದು ಹೇಳಿದ್ದಾರೆ.
ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ವೇಣುಗೋಪಾಲ್ ರಾಜಸ್ಥಾನದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಚಿನ್ ಪೈಲಟ್ ಗದ್ದಾರ್ (ದ್ರೋಹಿ) ಆತ ನನ್ನ ಉತ್ತರಾಧಿಕಾರಿಯಾಗಲು ಸಾಧ್ಯವಿಲ್ಲ ಎಂಬ ಸಿಎಂ ಅಶೋಕ್ ಗೆಹ್ಲೋಟ್ ಹೇಳಿಕೆಯಿಂದ ಈಗ ರಾಜಸ್ಥಾನದ ಕಾಂಗ್ರೆಸ್ ನಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದೆ.
ಅಶೋಕ್ ಗೆಹ್ಲೋಟ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪೈಲಟ್, ಇಂತಹ ಶಬ್ದ ಬಳಕೆ ಮಾಡುವುದು ಗೆಹ್ಲೋಟ್ ಗೆ ಶೋಭೆ ತರುವುದಿಲ್ಲ ಎಂದು ಪೈಲಟ್ ಹೇಳಿದ್ದಾರೆ. ಇದರಿಂದ ರಾಜಸ್ಥಾನದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಮೇಲೆ ಪರಿಣಾಮ ಉಂಟಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ರೀತಿಯ ಭಿನ್ನಮತವನ್ನು ಹೇಗೆ ಬಗೆಹರಿಸುತ್ತೀರಿ? ಎಂಬ ಪ್ರಶ್ನೆಗೆ ವೇಣುಗೋಪಾಲ್ ಪ್ರತಿಕ್ರಿಯೆ ನೀಡಿದ್ದು, ಎಲ್ಲವೂ ಸರಾಗವಾಗಿ ಬಗೆಹರಿಯಲಿದೆ ಎಂದಷ್ಟೇ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ