ಮಧ್ಯ ಪ್ರದೇಶ: ಶಾಲಾ ಬಸ್‌ನಲ್ಲೇ ಕುಸಿದು ಬಿದ್ದ 12 ವರ್ಷದ ಬಾಲಕ, ಹೃದಯಾಘಾತದಿಂದ ಸಾವು

ಮಧ್ಯ ಪ್ರದೇಶದ ಭಿಂದ್‌ನಲ್ಲಿ 12 ವರ್ಷದ ಬಾಲಕ ಶಾಲಾ ಬಸ್‌ನಲ್ಲೇ ಕುಸಿದುಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು, ಈ ಬಾಲಕ ರಾಜ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾದ ಅತ್ಯಂತ ಕಿರಿಯ ವ್ಯಕ್ತಿಯಾಗಿರಬಹುದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಿಂದ್: ಮಧ್ಯ ಪ್ರದೇಶದ ಭಿಂದ್‌ನಲ್ಲಿ 12 ವರ್ಷದ ಬಾಲಕ ಶಾಲಾ ಬಸ್‌ನಲ್ಲೇ ಕುಸಿದುಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು, ಈ ಬಾಲಕ ರಾಜ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾದ ಅತ್ಯಂತ ಕಿರಿಯ ವ್ಯಕ್ತಿಯಾಗಿರಬಹುದು ಎಂದು ಹೇಳಿದ್ದಾರೆ.

4ನೇ ತರಗತಿ ವಿದ್ಯಾರ್ಥಿ ಮನೀಶ್ ಜಾತವ್ ಗುರುವಾರ ಎಂದಿನಂತೆ ಶಾಲೆಗೆ ತೆರಳಿದ್ದ. ಮಧ್ಯಾಹ್ನ ಇಟಾವಾ ರಸ್ತೆಯಲ್ಲಿರುವ ತಮ್ಮ ಶಾಲೆಯಲ್ಲಿ ತನ್ನ ಸಹೋದರನೊಂದಿಗೆ ಊಟ ಮಾಡಿ ಮಧ್ಯಾಹ್ನ 2 ಗಂಟೆಗೆ ಮನೆಗೆ ತೆರಳಲು ಶಾಲಾ ಬಸ್ ಹತ್ತಿದ ಕೂಡಲೇ ಕುಸಿದುಬಿದ್ದಿದ್ದಾನೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಬಸ್ಸಿನ ಚಾಲಕ ಶಾಲಾ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಿದ್ದು, ಮಗುವನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ವೈದ್ಯರು ಬಾಲಕನನ್ನು ಬದುಕಿಸಿಕೊಳ್ಳುವಲ್ಲಿ ವಿಫಲರಾದರು ಎಂದು ಸಂಬಂಧಿಕರು ಹೇಳಿದ್ದಾರೆ.

"ಗುರುವಾರ ಮಧ್ಯಾಹ್ನ ಮನೀಶ್ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ನಾವು ಅವರಿಗೆ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಮಾಡಿದೆವು. ಆದರೆ ಬದುಕಿಸಲು ಸಾಧ್ಯವಾಗಲಿಲ್ಲ. ಅವರ ರೋಗಲಕ್ಷಣಗಳ ಪ್ರಕಾರ, ಬಾಲಕ ಹೃದಯಾಘಾತದಿಂದ ನಿಧನರಾಗಿದ್ದಾರೆ" ಎಂದು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಅನಿಲ್ ಗೋಯಲ್ ಪಿಟಿಐಗೆ ತಿಳಿಸಿದ್ದಾರೆ.

ತಮ್ಮ ಮಗನಿಗೆ ಇದುವರೆಗೂ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ ಎಂದು ಮನೀಷ್ ಅವರ ತಂದೆ ಕೋಮಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com