
ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಚೀನಾದ ಸೈನಿಕರು ಭಾರತೀಯ ಸೇನಾ ಸಿಬ್ಬಂದಿಯನ್ನು ಥಳಿಸುತ್ತಿದ್ದಾರೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆಗೆ ಬಿಜೆಪಿ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಕೂಡಲೇ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಹೇಳಿದೆ.
ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಮಾತನಾಡಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಿಮೋಟ್ ಕಂಟ್ರೋಲ್ ಆಗದಿದ್ದರೆ ಮತ್ತು ವಿರೋಧ ಪಕ್ಷ ದೇಶದೊಂದಿಗೆ ನಿಂತರೆ, ಭಾರತವನ್ನು ಕೀಳಾಗಿ ಮಾಡುವ ಮತ್ತು ಅದರ ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯವನ್ನು ಮುರಿಯುವ ಹೇಳಿಕೆಗಾಗಿ ರಾಹುಲ್ ಗಾಂಧಿ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆಯ ವೇಳೆ ಶುಕ್ರವಾರ ಜೈಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಮತ್ತು ಸರ್ಕಾರವು ಈ ಬೆದರಿಕೆಯನ್ನು ನಿರ್ಲಕ್ಷಿಸಲು ಪ್ರಯತ್ನಿಸುತ್ತಿದೆ. ಸರ್ಕಾರ ನಿದ್ದೆಯಲ್ಲಿದೆ ಮತ್ತು ಪರಿಸ್ಥಿತಿಯನ್ನು ಸ್ವೀಕರಿಸಲು ಸಿದ್ಧವಾಗಿಲ್ಲ ಎಂದು ಹೇಳಿದ್ದರು.
ಅರುಣಾಚಲ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಇತ್ತೀಚೆಗೆ ನಡೆದ ಘರ್ಷಣೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದ ಅವರು, ಈ ಪ್ರದೇಶದಲ್ಲಿ ಭಾರತೀಯ ಯೋಧರನ್ನು ಥಳಿಸಲಾಗುತ್ತಿದೆ ಎಂದು ಹೇಳಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಭಾಟಿಯಾ, ಕಾಂಗ್ರೆಸ್ ತನ್ನ ಮುಖ್ಯ ಪ್ರೇರಕ ಶಕ್ತಿಯಾಗಿ ಕಾಣುತ್ತಿರುವ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳದಿದ್ದರೆ, ಅವರ ಹೇಳಿಕೆಯು ವಿರೋಧ ಪಕ್ಷದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅರ್ಥ ಎಂದಿದ್ದಾರೆ.
ಕಾಂಗ್ರೆಸ್ ಕಡಿಮೆ ರಾಜಕೀಯ ಪಕ್ಷವಾಗಿ ಮಾರ್ಪಟ್ಟಿದೆ ಮತ್ತು ಭಾರತ ವಿರೋಧಿ ಚಟುವಟಿಕೆಗಳ ತಾಣವಾಗಿದೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ.
Advertisement