ಅರ್ಜೆಂಟೀನಾ ಗೆಲುವಿನ ಬಳಿಕ ಕೇರಳದಲ್ಲಿ ಹಿಂಸಾಚಾರ!
ತಿರುವನಂತಪುರಂ: ಫೀಫಾ ವಿಶ್ವಕಪ್-2022 ರಲ್ಲಿ ಅರ್ಜೆಂಟೀನಾ ಗೆಲುವಿನ ಬಳಿಕ ಕೇರಳದಲ್ಲಿ ಹಿಂಸಾಚಾರ ವರದಿಯಾಗಿದೆ. ಭಾನುವಾರ ರಾತ್ರಿ ಅರ್ಜೆಂಟೀನ ಗೆಲುವನ್ನು ಸಂಭ್ರಮಿಸುತ್ತಿದ್ದಾಗ ಹಿಂಸಾಚಾರ ನಡೆದಿದ್ದು, ಪರಿಸ್ಥಿತಿ ಕೈ ಮೀರಿತ್ತು.
ಕಣ್ಣೂರು ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಾಗಿ 6 ಮಂದಿ ಬಂಧನಕ್ಕೊಳಗಾಗಿದ್ದಾರೆ. ಓರ್ವ ವ್ಯಕ್ತಿಗೆ ಕಾಲಿನಲ್ಲಿ ಇರಿತದ ಗಾಯಗಳಾಗಿದೆ. ಮತ್ತೊಂದು ಘಟನೆಯಲ್ಲಿ ತಲಶ್ಶೇರಿಯಲ್ಲಿ ಪೊಲೀಸ್ ಅಧಿಕಾರಿಗೆ ಗಾಯಗಳಾಗಿದೆ ಎಂದು ಹಿರಿಯ ವಿಶೇಷ ಪೊಲೀಸ್ ಅಧಿಕಾರಿ ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಲಾಗಿದ್ದು, 5 ಮಂದಿಯಿದ್ದ ತಂಡ ಕಲೂರ್ ಜಂಕ್ಷನ್ ನಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯ ಮೇಲೆ ದಾಳಿ ನಡೆಸಿವೆ. ರಸ್ತೆ ತಡೆದು ಸಂಭ್ರಮಾಚರಣೆ ನಡೆಸುತ್ತಿದ್ದನ್ನು ವಿರೋಧಿಸಿದ್ದಕ್ಕೆ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆದಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ಅರುಣ್, ಶರತ್, ದಿಪಿನ್, ಜಾಕ್ಸನ್ ಹಾಗೂ ಮತ್ತೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ. ಸರ್ಕಾರಿ ಅಧಿಕಾರಿಗೆ ತಮ್ಮ ಕರ್ತವ್ಯ ನಿಭಾಯಿಸಲು ಅಡ್ಡಿಪಡಿಸಿದ ಆರೋಪದಡಿ ಕೇಸ್ ಬುಕ್ ಆಗಿದೆ. ಹಲ್ಲೆ ಘಟನೆಯ ವೀಡಿಯೋ ಚಾನಲ್ ಗಳಲ್ಲಿ ಪ್ರಕಟವಾಗಿದ್ದು, ಪೊಲೀಸ್ ಅಧಿಕಾರಿಯನ್ನು ಎಳೆದೊಯ್ಯುವ ದೃಶ್ಯಗಳು ಸೆರೆಯಾಗಿವೆ. ಕೇರಳದಲ್ಲಿ ಸಾವಿರಾರು ಮಂದಿ ಅರ್ಜೆಂಟೀನಾ ಗೆಲುವನ್ನು ಸಂಭ್ರಮಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ