ನವದೆಹಲಿ: ವಿಶ್ವದ ಕೆಲವು ಕಡೆಗಳಲ್ಲಿ ದಿಢೀರ್ ಕೋವಿಡ್-19 ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಬುಧವಾರ ದೇಶದಲ್ಲಿನ ಕೋವಿಡ್ -19 ಪರಿಸ್ಥಿತಿ ಕುರಿತು ಪರಾಮರ್ಶಿಸಿದರು. ನಿಗಾ ವಹಿಸುವಂತೆ ಹಾಗೂ ಕಠಿಣ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕೆಲವು ರಾಷ್ಟ್ರಗಳಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಪರಿಸ್ಥಿತಿ ಪರಾಮರ್ಶೆ ನಡೆಸಲಾಯಿತು. ಕೋವಿಡ್ ಇನ್ನೂ ಕೊನೆಯಾಗಿಲ್ಲ. ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದ್ದು, ಯಾವುದೇ ಪರಿಸ್ಥಿತಿಯಾದರೂ ನಿರ್ವಹಿಸಲು ನಾವು ಸಿದ್ಧರಿದ್ದೇವೆ ಎಂದು ಮಾಂಡವೀಯಾ ಟ್ವೀಟ್ ನಲ್ಲಿ ಹೇಳಿದ್ದಾರೆ.
ಐಸಿಎಂಆರ್ ಮಹಾನಿರ್ದೇಶಕ ರಾಜೀವ್ ಬಹ್ಲ್, ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್ ಮತ್ತು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಅಧ್ಯಕ್ಷ (ಎನ್ ಟಿಎಜಿಐ) ಡಾ.ಎನ್. ಕೆ. ಅರೋರಾ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಜಪಾನ್, ಅಮೆರಿಕಾ, ರಿಪಬ್ಲಿಕ್ ಆಫ್ ಕೊರಿಯಾ, ಬ್ರಜಿಲ್ ಮತ್ತು ಚೀನಾ ರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಕೋವಿಡ್ ಪ್ರಭೇದಗಳ ಪತ್ತೆಗೆ ಮಾದರಿಗಳ ಪರೀಕ್ಷೆಯನ್ನು ಹೆಚ್ಚಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವರು ಸೂಚಿಸಿದ್ದಾರೆ.
ಜನದಟ್ಟಣೆ, ಒಳಾಂಗಣ ಮತ್ತು ಹೊರಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು, ಇದು ಜನರಿಗೆ ಪ್ರಮುಖ ಎಂದಿರುವ ಡಾ. ವಿ.ಕೆ. ಪೌಲ್, ದೇಶದಲ್ಲಿ ಕೇವಲ ಶೇ. 27 ರಿಂದ 28 ರಷ್ಟು ಜನರಿಗೆ ಮಾತ್ರ ಕೋವಿಡ್ ಬೂಸ್ಟರ್ ಡೋಸ್ ನೀಡಲಾಗಿದೆ. ಇತರರು ಕೂಡಾ ಈ ಡೋಸ್ ಪಡೆಯಬೇಕಾಗಿದೆ. ಪ್ರತಿಯೊಬ್ಬರಿಗೂ ಮುನ್ನೆಚ್ಚರಿಕಾ ಡೋಸ್ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement