ಮತ್ತೆ ಶುರುವಾದ ಕೋವಿಡ್ ಆತಂಕ: ತಜ್ಞರೊಂದಿಗೆ ಸಭೆ ನಡೆಸಿದ ಕೇಂದ್ರ ಆರೋಗ್ಯ ಸಚಿವ, ಪರಿಸ್ಥಿತಿ ಅವಲೋಕನ

ಚೀನಾ, ದಕ್ಷಿಣ ಕೊರಿಯಾ, ಅಮೆರಿಕಾ, ಜಪಾನ್ ಮತ್ತು ಬ್ರೆಜಿಲ್‌ನಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಆರೋಗ್ಯ ಬಿಕ್ಕಟ್ಟನ್ನು ತಪ್ಪಿಸಲು ದೇಶದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ತಜ್ಞರೊಂದಿಗೆ ಸಭೆ ನಡೆಸುತ್ತಿರುವ ಕೇಂದ್ರ ಆರೋಗ್ಯ ಸಚಿವ.
ತಜ್ಞರೊಂದಿಗೆ ಸಭೆ ನಡೆಸುತ್ತಿರುವ ಕೇಂದ್ರ ಆರೋಗ್ಯ ಸಚಿವ.

ನವದೆಹಲಿ: ಚೀನಾ, ದಕ್ಷಿಣ ಕೊರಿಯಾ, ಅಮೆರಿಕಾ, ಜಪಾನ್ ಮತ್ತು ಬ್ರೆಜಿಲ್‌ನಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಆರೋಗ್ಯ ಬಿಕ್ಕಟ್ಟನ್ನು ತಪ್ಪಿಸಲು ದೇಶದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಸಂಬಂಧ ದೇಶದ ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಅವರು ಇಂದು ದೆಹಲಿಯಲ್ಲಿ ತಜ್ಞರ ತಂಡದೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಆರೋಗ್ಯ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿಗಳು, ಫಾರ್ಮಸ್ಯುಟಿಕಲ್ಸ್ ಮತ್ತು ಬಯೋಟೆಕ್ನಾಲಜಿ ವಿಭಾಗ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಿರ್ದೇಶಕ ರಾಜೀವ್ ಬೇಲ್, ನೀತಿ ಆಯೋಗ (ಆರೋಗ್ಯ) ಸದಸ್ಯ ವಿ.ಕೆ ಪೌಲ್ ಮತ್ತು ನ್ಯಾಷನಲ್ ಟೆಕ್ನಿಕಲ್ ಅಡ್ವಸರಿ ಗ್ರೂಪ್ ಆನ್ ಇಮ್ಯುನೈಜೇಷನ್ ಅಧ್ಯಕ್ಷ ಎನ್.ಎಲ್ ಆರೋರಾ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಸ್ತುತ ಚೀನಾ ಜೊತೆಗೆ ಜಪಾನ್, ಅಮೆರಿಕ, ಕೊರಿಯಾ ಮತ್ತು ಬ್ರೆಜಿಲ್ ದೇಶಗಳಲ್ಲಿಯೂ ಕೊರೋನಾ ಸೋಂಕು ವ್ಯಾಪಿಸಿದೆ. ಈ ಹಿನ್ನೆಲೆಯಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಬಗ್ಗೆ ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವು ಮಹತ್ವ ಪಡೆದಿದೆ.

ಜಿನೋಮ್ ಸೀಕ್ವೆನ್ಸಿಂಗ್​ ಪ್ರಮಾಣವು ಹೆಚ್ಚಾದರೆ ಮಾತ್ರ ದೇಶದಲ್ಲಿ ಹರಡುತ್ತಿರುವ ಹೊಸ ರೂಪಾಂತರಿಗಳನ್ನು ಪತ್ತೆ ಮಾಡಲು ಹಾಗೂ ಸಮುದಾಯ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಸಕಾಲದಲ್ಲಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಕೊವಿಡ್ ತಪಾಸಣೆಯನ್ನು ಹೆಚ್ಚಿಸಬೇಕು. ಪಾಸಿಟಿವ್ ಬಂದ ಎಲ್ಲ ಮಾದರಿಗಳನ್ನೂ ಜಿನೋಮ್ ಸೀಕ್ವೆನ್ಸಿಂಗ್​ಗಾಗಿ ಇನ್​ಸಾಕಾಗ್ ಪ್ರಯೋಗಾಲಯಗಳಿಗೆ ಕಡ್ಡಾಯವಾಗಿ ಕಳುಹಿಸಿಕೊಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಚೀನಾ ಸೇರಿದಂತೆ ವಿಶ್ವದ ಇತರ ದೇಶಗಳ ಕೊವಿಡ್ ಸೋಂಕು ಪ್ರಕರಣಗಳ ಅಂಕಿಅಂಶ ಮತ್ತು ಆರೋಗ್ಯ ಪರಿಸ್ಥಿತಿಯನ್ನು ಗಮನಿಸಲು ಕೇಂದ್ರ ಸರ್ಕಾರವು ಆಂತರಿಕ ಕಾರ್ಯಪಡೆಯೊಂದನ್ನು ರಚಿಸಿದೆ. ಈ ಸಮಿತಿಯಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿದ್ದು, ಭಾರತದ ಮೇಲಿನ ಪರಿಣಾಮ ಮತ್ತು ಸ್ಥಳೀಯವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಕಣ್ಗಾವಲು ಇರಿಸಲು, ತುರ್ತು ನಿರ್ಧಾರ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com