
ನವದೆಹಲಿ: ಚೀನಾದೊಂದಿಗಿನ ಗಡಿ ಸಮಸ್ಯೆಯ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ಬುಧವಾರ ಲೋಕಸಭೆ ಸಭಾತ್ಯಾಗ ಮಾಡಿದವು.
ಶೂನ್ಯ ವೇಳೆಗೆ ಸದನ ಸಮಾವೇಶಗೊಂಡ ತಕ್ಷಣ ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸದಸ್ಯರು ಸಭಾತ್ಯಾಗ ಮಾಡಿದರು. ಇದನ್ನು ಅನುಸರಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಜನತಾದಳ (ಯುನೈಟೆಡ್) ಸಂಸದರು ಸಭಾತ್ಯಾಗ ಮಾಡಿದರು.
ಕಾಂಗ್ರೆಸ್‌ನ ಸಭಾನಾಯಕ ಅಧೀರ್ ರಂಜನ್ ಚೌಧರಿ ಅವರು ಭಾರತ-ಚೀನಾ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದರು. ಚರ್ಚೆಗೆ ಅವಕಾಶ ಕೇಳುವುದು ಪ್ರತಿಪಕ್ಷಗಳ ಹಕ್ಕು ಎಂದು ಹೇಳಿದರು.
'ಕಲಾಪ ಶುರುವಾದಾಗಿನಿಂದಲೂ ಚೀನಾ ವಿಚಾರದಲ್ಲಿ ಚರ್ಚೆಗೆ ಒತ್ತಾಯಿಸುತ್ತಿದ್ದೇವೆ. ಟಿವಿಯಲ್ಲಿ, ಹೊರಗೆ (ಸಂಸತ್ತಿನ) ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಪ್ರತಿಪಕ್ಷಗಳಿಗೆ ಚರ್ಚೆಗೆ ಅವಕಾಶ ಕೊಡಿ. ಇದು ನಮ್ಮ ಹಕ್ಕು' ಎಂದರು.
ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಕೂಡ ಈ ಕುರಿತು ಚರ್ಚೆಗೆ ಒತ್ತಾಯಿಸಿದರು. ಬಳಿಕ ಸದನದಲ್ಲಿ ಡ್ರಗ್ಸ್ ಹಾವಳಿ ಕುರಿತು ಮತ್ತೆ ಚರ್ಚೆ ಆರಂಭವಾಯಿತು.
Advertisement