ಬಿಹಾರದಲ್ಲಿ ಇಟ್ಟಿಗೆ ಭಟ್ಟಿ ಸ್ಫೋಟ: ಆರು ಜನ ಸಾವು, 10 ಮಂದಿಗೆ ಗಾಯ

ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಇಟ್ಟಿಗೆ ಭಟ್ಟಿ(ಇಟ್ಟಿಗೆ ಗೂಡು)ಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ ಆರು ಜನ ಸಾವನ್ನಪ್ಪಿದ್ದಾರೆ ಮತ್ತು 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಇಟ್ಟಿಗೆ ಭಟ್ಟಿ(ಇಟ್ಟಿಗೆ ಗೂಡು)ಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ ಆರು ಜನ ಸಾವನ್ನಪ್ಪಿದ್ದಾರೆ ಮತ್ತು 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಿಲ್ಲೆಯ ರಾಮಗಢ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ನೀರಗಿರ್ ಗ್ರಾಮದಲ್ಲಿ ಇಟ್ಟಿಗೆ ಗೂಡಿನಲ್ಲಿ ಪ್ರಬಲ ಸ್ಫೋಟದ ಸದ್ದು ಕೇಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರ್ಮಿಕರು ಇಟ್ಟಿಗೆ ಗೂಡಿಗೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ.

ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಅವಶೇಷಗಳಲ್ಲಿ ಹಲವರು ಸಿಲುಕಿಕೊಂಡಿದ್ದಾರೆ. ಸ್ಥಳದಲ್ಲಿ ಕತ್ತಲು ಆವರಿಸಿದ್ದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದದಾರೆ.

ಇದುವರೆಗೆ ಆರು ಮೃತದೇಹಗಳನ್ನು ಸ್ಥಳದಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಲ್ಲದೆ, ಘಟನೆಯಲ್ಲಿ ಸುಟ್ಟಗಾಯಗಳಾಗಿರುವ 10 ಮಂದಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಟ್ಟಿಗೆ ತಯಾರಿಕೆಯಲ್ಲಿ ತೊಡಗಿರುವ ಹೆಚ್ಚಿನ ಕಾರ್ಮಿಕರು ಉತ್ತರ ಪ್ರದೇಶದ ನಿವಾಸಿಗಳು ಎಂದು ಹೇಳಲಾಗಿದೆ.

ಗೋಪಾಲ್ ಗಂಜ್ ಜಿಲ್ಲೆಯ ಕೋಟ್ವಾ ಗ್ರಾಮದ ನಿವಾಸಿ ಹರೇಂದ್ರ ಚೌಧರಿ ಈ ಇಟ್ಟಿಗೆ ಭಟ್ಟಿ ನಡೆಸುತ್ತಿದ್ದ ಎಂದು ಹೇಳಲಾಗಿದೆ.

ಇನ್ನೂ 25 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ನವಲ್ ಕಿಶೋರ್ ಚೌಧರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com