ಭಗವಂತನ ಪಾದಗಳಲ್ಲಿ ಲೀನರಾದ ಹೀರಾಬೆನ್: ತಾಯಿಯ ಅಗಲಿಕೆಗೆ ಮೋದಿ ಭಾವುಕ ಟ್ವೀಟ್, ಅಹಮದಾಬಾದ್'ನತ್ತ ಪ್ರಧಾನಿ

ಭಗವಂತನ ಪಾದಗಳಲ್ಲಿ ಹೀರಾಬೆನ್ ಮೋದಿಯವರು ಲೀನರಾಗಿದ್ದು, ತಾಯಿಯ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಹ್ಮದಾಬಾದ್: ಭಗವಂತನ ಪಾದಗಳಲ್ಲಿ ಹೀರಾಬೆನ್ ಮೋದಿಯವರು ಲೀನರಾಗಿದ್ದು, ತಾಯಿಯ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ತಾಯಿಯ ನಿಧನಕ್ಕೆ ಸರಣಿ ಟ್ವೀಟ್ ಮಾಡಿ ಮೋದಿಯವರು ಭಾವುಕರಾಗಿದ್ದಾರೆ. ನಮ್ಮ ತಾಯಿಯ ಜೀವನದ ಮೂರು ಹಂತ ಕಂಡಿದ್ದೇನೆ. ತಪಸ್ವೀ ಬದುಕು, ನಿಸ್ವಾರ್ಥತೆ ಪ್ರತೀಕ, ಮೌಲ್ಯಾಧಾರಿತ ಬದ್ಧತೆ ಎಂದು ಸಂತಾಪ ಸೂಚಿಸಿದ್ದಾರೆ.

ಶಾನ್‌ ದಾರ್‌ ಶತಾಬ್ದಿ ಕಾ ಈಶ್ವರ್‌ ಚರಣೋ ಮೇ ವಿರಾಮ್..‌ ತಾಯಿಯಲ್ಲಿ ಯಾವಾಗಲೂ ತ್ರಿಮೂರ್ತಿಗಳನ್ನು ನಾನು ಕಂಡಿದ್ದೇನೆ. ಅವರ ಬದುಕು ತಪೋ ಸದೃಶ, ನಿಸ್ವಾರ್ಥ ಕರ್ಮಯೋಗಿಯ ಬಾಳ್ವೆ. ಮೌಲ್ಯಗಳಿಗೆ ಬದ್ಧವಾಗಿದ್ದ ತುಂಬು ಜೀವನ..ಅವರಿಗೆ 100 ವರ್ಷ ಪೂರ್ಣವಾದಾಗ ಆಶೀರ್ವಾದ ಪಡೆಯಲು ಭೇಟಿ ನೀಡಿದ್ದೆ. ಆಗ ಅವರು ನೀಡಿದ ಹಿತ ವಚನ ನೆನಪಾಗುತ್ತಿದೆ. ಯಾವಾಗಲೂ ಬುದ್ಧಿವಂತಿಕೆಯಿಂದ ಕೆಲಸಗಳನ್ನು ಮಾಡಿ, ಪರಿಶುದ್ಧತೆಯಿಂದ ಬದುಕಿರಿ ಎಂದು ಹೇಳಿದ್ದರು ಎಂದು ಬರೆದುಕೊಂಡಿದ್ದಾರೆ.

ಅಹಮದಾಬಾದ್'ನತ್ತ ಪ್ರಧಾನಿ
ತಾಯಿಯ ನಿಧನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಅಹಮದಾಬಾದ್‌ಗೆ ತೆರಳಿದ್ದಾರೆ. ಹೌರಾ, ಕೋಲ್ಕತ್ತಾದಲ್ಲಿ ವಂದೇ ಭಾರತ್ ರೈಲಿಗೆ ಫ್ಲ್ಯಾಗ್‌ಆಫ್ ಮತ್ತು ರೈಲ್ವೆಯ ಇತರ ಅಭಿವೃದ್ಧಿ ಕಾಮಗಾರಿಗಳು ಮತ್ತು ನಮಾಮಿ ಗಂಗೆ ಅಡಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಪ್ರಧಾನಿ ಪಾಲ್ಗೊಳ್ಳಬೇಕಿತ್ತು.

ಹಿಂದಿನ ಯೋಜನೆಯಂತೆ ಈ ಕಾರ್ಯಕ್ರಮಗಳು ನಡೆಯಲಿವೆ ಎನ್ನಲಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಬಹುದು ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಹಿರಿಯ ಜೀವವಾಗಿರುವ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್, ಇದೇ ವರ್ಷದ ಜೂನ್​ ತಿಂಗಳಲ್ಲಿ ನೂರು ವಸಂತಗಳನ್ನು ಪೂರೈಸಿದ್ದರು. ಅಂದು ಸಹ ಮೋದಿ ಖುದ್ದು ಅಮ್ಮನನ್ನು ಭೇಟಿ ಮಾಡಿ, ಅವರ ಪಾದಗಳನ್ನು ತೊಳೆದು ಆಶೀರ್ವಾದ ಪಡೆದಿದ್ದರು. ಅಲ್ಲದೇ, ಇತ್ತೀಚೆಗಷ್ಟೇ ಮುಗಿದ ಗುಜರಾತ್ ವಿಧಾನಸಭೆ ಚುನಾವಣೆಗೂ ಒಂದು ದಿನ ಮೊದಲು ಪ್ರಧಾನಿ ಮೋದಿ ಅವರು ಹೀರಾಬೆನ್​ ಅವರನ್ನು ಭೇಟಿ ಮಾಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಹೀರಾಬೆನ್​ ಅವರು ಗಾಲಿಕುರ್ಚಿಯ ಮೇಲೆ ಬಂದು ಮತ ಚಲಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com