ಕ್ಯಾಬಿನ್ ನಲ್ಲಿ ದಿಢೀರ್ ಹೊಗೆ; ಜಬಲ್‌ಪುರಕ್ಕೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ ದೆಹಲಿಗೆ ವಾಪಸ್
ನವದೆಹಲಿ: ಕ್ಯಾಬಿನ್ ನಲ್ಲಿ ದಿಢೀರ್ ಹೊಗೆ ಕಾಣಿಸಿಕೊಂಡ ಕಾರಣ ಜಬಲ್‌ಪುರಕ್ಕೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ದೆಹಲಿಯಿಂದ ಮಧ್ಯಪ್ರದೇಶದ ಜಬಲ್‌ಪುರಕ್ಕೆ ಹೊರಟಿದ್ದ ಸ್ಪೈಸ್‌ಜೆಟ್ ಸ್ಪೈಸ್‌ಜೆಟ್ Q400 ವಿಮಾನ ಸಂಖ್ಯೆ SG-2962 (ದೆಹಲಿ-ಜಬಲ್‌ಪುರ) ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ತಕ್ಷಣ ದೆಹಲಿಯಲ್ಲಿ ತುರ್ತು ಭೂಸರ್ಶ ಮಾಡಿದೆ. ಸ್ಪೈಸ್‌ಜೆಟ್ ವಿಮಾನವು ಶನಿವಾರ ಬೆಳಿಗ್ಗೆ ಪ್ರಯಾಣವನ್ನು ಆರಂಭದಲ್ಲೇ ಮೊಟಕುಗೊಳಿಸಿ ಸುರಕ್ಷಿತವಾಗಿ ದೆಹಲಿ ವಿಮಾನ ನಿಲ್ದಾಣದಲ್ಲೇ ಕೆಳಗಿಳಿದಿದೆ.
ವಿಮಾನವು ಸುಮಾರು 5000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಕ್ಯಾಬಿನ್‌ನಲ್ಲಿ ಹೊಗೆ ಬರುತ್ತಿರುವುದನ್ನು ವೈಮಾನಿಕ ಸಿಬ್ಬಂದಿ ಗಮನಿಸಿದ್ದಾರೆ. ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ವಿಮಾನದಲ್ಲಿ 185 ಮಂದಿ ಪ್ರಯಾಣಿಕರಿದ್ದರು. ನಾಲ್ವರು ವೈಮಾನಿಕ ಸಿಬ್ಬಂದಿ ಹಾಗೂ ಇಬ್ಬರು ಪೈಲೆಟ್‌ಗಳು ಇದ್ದರು.
ಇತ್ತೀಚೆಗಷ್ಟೇ ಸ್ಪೈಸ್‌ಜೆಟ್‌ನ ವಿಮಾನವೊಂದು ಹಾರಾಟದ ವೇಳೆ ಹಕ್ಕಿಯೊಂದು ಬಡಿದ ಪರಿಣಾಮ ಪಟ್ನಾದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇದಕ್ಕೂ ಮುನ್ನ ಜೂನ್ 19 ರಂದು ದೆಹಲಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನವೊಂದು ತಾಂತ್ರಿಕ ದೋಷದಿಂದ ವಿಮಾನದೊಳಗೆ ಬೆಂಕಿ ಕಾಣಿಸಿಕೊಂಡು ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ