ತಾಂತ್ರಿಕ ದೋಷ: ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ!!

ದೆಹಲಿಯಿಂದ ದುಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನವೊಂದು ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ದೆಹಲಿಯಿಂದ ದುಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನವೊಂದು ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ.

ಸ್ಪೈಸ್ ಜೆಟ್ ವಿಮಾನ ಸಂಖ್ಯೆ ಎಸ್​ಜಿ-11 ವಿಮಾನದಲ್ಲಿ ಇಂಧನ ಸೋರಿಕೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ವಿಮಾನವು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ವಿಮಾನದಲ್ಲಿದ್ದ ಪೈಲಟ್‌ಗಳು ಜೆಟ್‌ನ ರೆಕ್ಕೆಗಳಲ್ಲಿರುವ ಒಂದು ಟ್ಯಾಂಕ್‌ನಿಂದ ಸಂಭವನೀಯ ಇಂಧನ ಸೋರಿಕೆಯ ಆಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಪೈಸ್‌ಜೆಟ್ ಎಸ್​ಜಿ 11 ಬೋಯಿಂಗ್ 737 ಮ್ಯಾಕ್ಸ್- 8 ವಿಮಾನ ಇಂದು ಬೆಳಗ್ಗೆ ದೆಹಲಿಯಿಂದ ದುಬೈ ತೆರಳುತ್ತಿತ್ತು. ಬಲೂಚಿಸ್ತಾನ ಪ್ರದೇಶದ ಮೇಲೆ 3600 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ತಾಂತ್ರಿಕ ದೋಷ ಕಂಡುಬಂದಿದೆ. ಈ ವೇಳೆ ಇಂಡಿಕೇಟರ್​ ಲೈಟಿಂಗ್​ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಕರಾಚಿಗೆ ಮರಳಿಸಿ ತುರ್ತು ಲ್ಯಾಂಡಿಂಗ್​ ಮಾಡಲಾಗಿದೆ. ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ವಿಮಾನದಲ್ಲಿ 150 ಮಂದಿ ಪ್ರಯಾಣಿಕರಿದ್ದರು. ಯಾವುದೇ ಸಮಸ್ಯೆ ಉಂಟಾಗದಂತೆ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಗಿದೆ ಎಂದು ಸ್ಪೈಸ್​ಜೆಟ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಮಾನದಲ್ಲಿ ಯಾವುದೇ ಅಪಾಯ ಇರಲಿಲ್ಲ. ಆದಾಗ್ಯೂ ಪ್ರಯಾಣಿಕರ ಹಿತದೃಷ್ಟಿಯಂದ ವಿಮಾನವನ್ನು ಕರಾಚಿಯಲ್ಲಿ ಭೂಸ್ಪರ್ಶ ಮಾಡಲಾಯಿತು. ವಿಮಾನದಲ್ಲಿ ಈ ಹಿಂದೆ ಯಾವುದೇ ದೋಷ ಕಂಡು ಬಂದ ಬಗ್ಗೆ ವರದಿಯಾಗಿಲ್ಲ. ಪ್ರಯಾಣಿಕರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದ್ದು, ಅವರನ್ನು ದುಬೈಗೆ ಕರೆದೊಯ್ಯಲು ಬದಲಿ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ವಾಯುಯಾನ ನಿಯಂತ್ರಕ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಪ್ರಕಾರ, ''ಸಿಬ್ಬಂದಿ ಅಸಾಮಾನ್ಯ ಇಂಧನ ಪ್ರಮಾಣ ಕಡಿತವನ್ನು ಗಮನಿಸಿದ ಕಾರಣ, ತುರ್ತು ಭೂಸ್ಪರ್ಶ ಮಾಡಿದ್ದಾಗಿ ತಿಳಿಸಿದ್ದಾರೆ. ಸುಲಭವಾಗಿ ಹೆಳುವುದಾದರೆ, ಕಾಕ್‌ಪಿಟ್‌ನಲ್ಲಿದ್ದ ಸೂಚಕದಲ್ಲಿ ಇಂಧನವನ್ನು ತೋರಿಸುವ ವಿಭಾಗದಲ್ಲಿ, ಅನಿರೀಕ್ಷಿತ ಇಂಧನ ನಷ್ಟ ತೋರಿಸುತ್ತಿತ್ತು. ಇದರಿಂದಾಗಿ ಪೈಲಟ್‌ ವಿಮಾನವನ್ನು ಕರಾಚಿಯಲ್ಲಿ ಲ್ಯಾಂಡ್‌ ಮಾಡಿದ್ದಾರೆ. ಇದು ತುರ್ತು ಲ್ಯಾಂಡಿಂಗ್‌ ಆಗಿರಲಿಲ್ಲ. ಮುನ್ನೆಚ್ಚರಿಕೆಯ ಲ್ಯಾಂಡಿಂಗ್‌ ಆಗಿತ್ತು ಎಂದು ಮೂಲಗಳು ತಿಳಿಸಿವೆ.

ಕಳೆದ ಮೂರು ತಿಂಗಳಿನಲ್ಲಿ ಸ್ಪೈಸ್‌ ಜೆಟ್‌ ವಿಮಾನ ತಾಂತ್ರಿಕ ತೊಂದರೆ ಎದುರಿಸಿದ್ದು ಇದು 8ನೇ ಬಾರಿಯಾಗಿದೆ. ಇದರ ಬೆನ್ನಲ್ಲಿಯೇ ಸೋಷಿಯಲ್‌ ಮೀಡಿಯಾದಲ್ಲಿ ಸ್ಫೈಸ್‌ ಜೆಟ್‌ ವಿಮಾನದ ಸುರಕ್ಷತೆ ಬಗ್ಗೆ ಪ್ರಶ್ನೆ ಎತ್ತಲಾಗಿದೆ.  

ಏವಿಯೇಷನ್ ರೆಗ್ಯುಲೇಟರ್ ಪ್ರಕಾರ ಕಳೆದ ತಿಂಗಳಷ್ಟೇ ಸ್ಪೈಸ್‌ಜೆಟ್ ವಿಮಾನದ ಫ್ಲೀಟ್-ವೈಡ್ ಸುರಕ್ಷತಾ ಲೆಕ್ಕಪರಿಶೋಧನೆಯನ್ನು ನಡೆಸಿತು ಮತ್ತು ಪ್ರಕರಣದ ಆಧಾರದ ಮೇಲೆ ತಪಾಸಣೆಗಳನ್ನು ಮುಂದುವರೆಸಿದೆ. ಈ ಹಿಂದೆ ದೆಹಲಿಯಿಂದ ಜಬಲ್‌ಪುರಕ್ಕೆ ಹಾರುತ್ತಿದ್ದ ಸ್ಪೈಸ್‌ಜೆಟ್ Q400 ವಿಮಾನದ ಪೈಲಟ್ ಕ್ಯಾಬಿನ್‌ನಲ್ಲಿ ಹೊಗೆ ಪತ್ತೆಯಾದ ನಂತರ ತುರ್ತು ಭೂಸ್ಪರ್ಶ ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com