ಮೇಘಸ್ಫೋಟ; ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ; 'ಜನರ ಜೀವ ರಕ್ಷಣೆಗೆ ಆದ್ಯತೆ': ಅಮಿತ್ ಶಾ

ಖ್ಯಾತ ಪವಿತ್ರ ಯಾತ್ರಾತಾಣ ಅಮರನಾಥ ಗುಹೆ ಬಳಿ ಮೇಘಸ್ಫೋಟ ಸಂಭವಿಸಿರುವ ಹಿನ್ನಲೆಯಲ್ಲಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (Indo-Tibetan Border Police-ITBP) ಮಾಹಿತಿ ನೀಡಿದೆ.
ಅಮರನಾಥ್ ಗುಹೆ ಬಳಿ ಮೇಘಸ್ಫೋಟ
ಅಮರನಾಥ್ ಗುಹೆ ಬಳಿ ಮೇಘಸ್ಫೋಟ
Updated on

ನವದೆಹಲಿ: ಖ್ಯಾತ ಪವಿತ್ರ ಯಾತ್ರಾತಾಣ ಅಮರನಾಥ ಗುಹೆ ಬಳಿ ಮೇಘಸ್ಫೋಟ ಸಂಭವಿಸಿರುವ ಹಿನ್ನಲೆಯಲ್ಲಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (Indo-Tibetan Border Police-ITBP) ಮಾಹಿತಿ ನೀಡಿದೆ.

ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಅಮರನಾಥದ ಪವಿತ್ರ ಗುಹೆಯ ದೇಗುಲದ ಬಳಿ ಮೇಘಸ್ಫೋಟ ಸಂಭವಿಸಿದ್ದು, ಈ ವೇಳೆ ದಿಢೀರ್ ಉಂಟಾದ ಪ್ರವಾಹಕ್ಕೆ ಸಿಲುಕಿ 3 ಮಹಿಳೆಯರು, ಇಬ್ಬರು ಪುರುಷರು ಸೇರಿ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಅನೇಕರು ನಾಪತ್ತೆಯಾಗಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್-ITBP ಮಾಧ್ಯಮ ಸಾರ್ವಜನಿಕ ಸಂಪರ್ಕಾಧಿಕಾರಿ ವಿವೇಕ್ ಕುಮಾರ್ ಪಾಂಡೆ ಅವರು, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಮಳೆ ಇನ್ನೂ ಮುಂದುವರೆದಿದೆ. ಅಪಾಯದ ಮಟ್ಟವನ್ನು ಗಮನಿಸಿದರೆ, ಪ್ರದೇಶ ಜಲಾವೃತವಾಗಿರುವ ಕಾರಣ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಅಂತೆಯೇ ಯಾತ್ರಾತಾಣದ ಬಳಿ ಹವಾಮಾನ ಸಹಜ ಸ್ಥಿತಿಯಲ್ಲಿದ್ದು, ತಾತ್ಕಾಲಿಕ ವ್ಯವಸ್ಥೆ ಮಾಡಿದರೆ ನಾಳೆ ಯಾತ್ರೆಯನ್ನು ಪುನರಾರಂಭಿಸಬಹುದು. ಇಂದು ಸಂಜೆ 5.30ರ ಸುಮಾರಿಗೆ ಧಾರಾಕಾರ ಮಳೆಯಾಗಿದ್ದು, ಏಕಾಏಕಿ ಭಾರಿ ಪ್ರಮಾಣದ ನೀರು ಹರಿದು ಬಂದಿತ್ತು. ಅಮರನಾಥ ಗುಹೆಯ ಮೇಲ್ಭಾಗದಲ್ಲಿ ಮೇಘಸ್ಫೋಟ ಸಂಭವಿಸಿದೆ. ಏಜೆನ್ಸಿಗಳಿಗೆ ಈ ಕುರಿತು ಎಚ್ಚರಿಕೆ ನೀಡಲಾಗಿದೆ. ಸ್ಥಳದಲ್ಲಿ ಟೆಂಟ್‌ಗಳಿದ್ದವು, 10-15 ನಿಮಿಷಗಳಲ್ಲಿ ಜನರನ್ನು ಹೊರತೆಗೆಯಲಾಯಿತು. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದ್ದಾರೆ.

ಅಂತೆಯೇ ಯಾತ್ರಾರ್ಥಿಗಳ ಹಲವು ಟೆಂಟ್ ಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದು, ರಕ್ಷಣಾ ಪಡೆಗಳು ತಕ್ಷಣ ರಕ್ಷಣಾ ಕಾರ್ಯ ಆರಂಭಿಸಿದವು. ನಾವು ಭಾರತೀಯ ಸೇನೆ ಮತ್ತು ಇತರ ರಕ್ಷಣಾ ಪಡೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಲವರನ್ನು ರಕ್ಷಿಸಲಾಗಿದೆ ಎಂದು ಹೇಳಿದರು.

'ಜನರ ಜೀವ ರಕ್ಷಣೆಗೆ ಆದ್ಯತೆ': ಅಮಿತ್ ಶಾ
ಇನ್ನು ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, 'ಅಮರನಾಥ ಗುಹೆಯಲ್ಲಿ ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹಕ್ಕೆ ಸಂಬಂಧಿಸಿದಂತೆ ನಾನು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಮಾತನಾಡಿದ್ದೇನೆ. NDRF, SDRF, BSF ಮತ್ತು ಸ್ಥಳೀಯ ನಿರ್ವಾಹಕರು ರಕ್ಷಣಾ ಕಾರ್ಯವನ್ನು ಮಾಡುತ್ತಿದ್ದಾರೆ. ಜನರ ಜೀವ ಉಳಿಸುವುದೇ ನಮ್ಮ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಅಂತೆಯೇ  ಅಮರನಾಥ ಗುಹೆ ಬಳಿ ಮೇಘಸ್ಫೋಟ ವಿಚಾರವಾಗಿ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು "ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. SDRF ಮತ್ತು NDRF ತಂಡಗಳು ಸಾಧ್ಯವಿರುವ ಎಲ್ಲ ಪರಿಹಾರ ಮತ್ತು ಸಹಾಯವನ್ನು ಒದಗಿಸಲು ತಕ್ಷಣವೇ ಕಾರ್ಯಪ್ರವೃತ್ತವಾಗಿವೆ ಎಂದು ಖಚಿತಪಡಿಸಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com