ವಾಟ್ಸಾಪ್ ನಲ್ಲಿ ನೂಪುರ್ ಶರ್ಮಾ ಬೆಂಬಲಿಸಿ ಸ್ಟೇಟಸ್ ಹಾಕಿಕೊಂಡಿದ್ದಕ್ಕೆ ಚಾಕು ಇರಿತ: ಯುವಕ ಆರೋಪ

ಬಿಜೆಪಿಯಿಂದ ಅಮಾನತುಗೊಂಡಿರುವ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ವಿಡಿಯೋವೊಂದನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಶೇರ್ ಮಾಡಿದ್ದಕ್ಕೆ ತನಗೆ ಚಾಕುವಿನಿಂದ ಇರಿಯಲಾಗಿದೆ ಎಂದು ಬಿಹಾರದ ಸೀತಾಮರ್ಹಿಯ ಯುವಕನೊಬ್ಬ ಆರೋಪಿಸಿದ್ದಾನೆ.
ಚಾಕು ಇರಿತಕ್ಕೊಳಗಾದ ಯುವಕ, ನೂಪುರ್ ಶರ್ಮಾ
ಚಾಕು ಇರಿತಕ್ಕೊಳಗಾದ ಯುವಕ, ನೂಪುರ್ ಶರ್ಮಾ

ಪಾಟ್ನಾ: ಬಿಜೆಪಿಯಿಂದ ಅಮಾನತುಗೊಂಡಿರುವ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ವಿಡಿಯೋವೊಂದನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಶೇರ್ ಮಾಡಿದ್ದಕ್ಕೆ ತನಗೆ ಚಾಕುವಿನಿಂದ ಇರಿಯಲಾಗಿದೆ ಎಂದು ಬಿಹಾರದ ಸೀತಾಮರ್ಹಿಯ ಯುವಕನೊಬ್ಬ ಆರೋಪಿಸಿದ್ದಾನೆ.

ಆದಾಗ್ಯೂ, ಪೊಲೀಸರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಸ್ಥಳೀಯರ ಮಾಹಿತಿ ಆಧಾರದ ಮೇಲೆ ಜುಲೈ 15 ರ ಸಂಜೆ ಕೆಲವು ಸ್ಥಳೀಯರು ತಂಬಾಕು ನಶೆಯ ಪ್ರಭಾವದಿಂದ ವಾದವೊಂದರಲ್ಲಿ ಆ ಯುವಕನಿಗೆ ಇರಿದಿದ್ದಾರೆ ಎಂದು ಹೇಳಿದ್ದಾರೆ. ದರ್ಭಾಂಗಾದ ಸ್ಥಳೀಯ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ 23 ವರ್ಷದ ಅಂಕಿತ್ ಝಾ, ನೂಪುರ್ ಶರ್ಮಾ ಅವರ ವಿಡಿಯೋವನ್ನು ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಅಪ್ ಲೋಡ್ ಮಾಡಿ ನೋಡುತ್ತಿದ್ದಾಗ ಯಾರೋ ತನ್ನ ಬೆನ್ನಿಗೆ ಹಲವು ಬಾರಿ ಇರಿದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಗಾಯಗೊಂಡಿದ್ದ ಆತನನನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ನಾಲ್ಕು ಹೆಸರುಗಳನ್ನು ಉಲ್ಲೇಖಿಸಿ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಆದರೆ, ನೂಪುರ್ ಶರ್ಮಾಗೆ ಸಂಬಂಧಿಸಿದ ವಿಡಿಯೋ ಡಿಲೀಟ್ ಮಾಡಿದ ನಂತರವೇ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ ಎಂದು ಸಂತ್ರಸ್ತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಪಾನ್ ಶಾಪ್ ನಲ್ಲಿ ಸಿಗರೇಟ್ ಸೇದುವ ವಿಚಾರವಾಗಿ ಮೂರ್ನಾಲ್ಕು ಜನರ ನಡುವೆ ಜಗಳ ನಡೆದು ಜುಲೈ 15 ರಂದು ಸಂಜೆ ನಾನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಾಕುವಿನಿಂದ ಇರಿದ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ನೂಪುರ್ ಶರ್ಮಾ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿದೆ ಎಂದು ಸಂತ್ರಸ್ತ ಸುದ್ದಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಇದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಸೀತಾಮರ್ಹಿಯ ಪೊಲೀಸ್ ಅಧೀಕ್ಷಕ ಹರ್ ಕಿಶೋರ್ ರೈ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com