ನವದೆಹಲಿ: ಮದ್ರಾಸ್ ಹೈಕೋರ್ಟ್ ಮರು ಮರಣೋತ್ತರ ಪರೀಕ್ಷೆ ಮಾಡುವಂತೆ ನೀಡಿದ್ದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಕೋರಿ ಕಲ್ಲಕುರಿಚಿಯ ಖಾಸಗಿ ಶಾಲೆಯ ವಿದ್ಯಾರ್ಥಿನಿಯ ಪೋಷಕರು ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಬದಲಿಗೆ ನಾಳೆ ಬಾಲಕಿಯ ಕುಟುಂಬದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಮೃತ ಬಾಲಕಿಯ ತಂದೆ ಇಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಮರಣೋತ್ತರ ಪರೀಕ್ಷೆಯಲ್ಲಿ ತಮ್ಮಿಚ್ಛೆಯ ವೈದ್ಯಕೀಯ ತಂಡವನ್ನು ನೇಮಿಸಿ ಮರು ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಮನವಿ ಮಾಡಿಕೊಂಡಿದ್ದರು.
ಕಲ್ಲಕುರಿಚಿಯ ಖಾಸಗಿ ಶಾಲೆಯ ಹಾಸ್ಟೆಲ್ ನಲ್ಲಿ 12ನೇ ತರಗತಿಯ ವಿದ್ಯಾರ್ಥಿನಿಯ ಸಾವಿನ ನಂತರ ಪ್ರತಿಭಟನೆ ಹಿನ್ನೆಲೆಯಲ್ಲಿ ಭುಗಿಲೆದ್ದ ತೀವ್ರ ಹಿಂಸಾಚಾರ ನಂತರ 2ನೇ ಬಾರಿಗೆ ಮರಣೋತ್ತರ ಪರೀಕ್ಷೆ ಮಾಡುವಂತೆ ನಿನ್ನೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿತ್ತು.
ಮೃತ ವಿದ್ಯಾರ್ಥಿನಿಯ ಮೊದಲ ಶವಪರೀಕ್ಷೆ ಮಾಡಿದ್ದು ಜುಲೈ 14ರಂದು, ಅದರಲ್ಲಿ ವಿದ್ಯಾರ್ಥಿನಿ ಸಾಯುವುದಕ್ಕೆ ಮೊದಲು ಆಕೆಯ ದೇಹದಲ್ಲಿ ಗಾಯಗಳಾಗಿವೆ. ಇದಾದ ಬಳಿಕ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ವಿದ್ಯಾರ್ಥಿನಿ ತಂದೆ ಇದೊಂದು ಕೊಲೆ ಎಂಬ ಸಂಶಯವಿರುವುದರಿಂದ ಎರಡನೇ ಬಾರಿ ಶವಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ್ದರು.
ಇನ್ನು ಪ್ರಕರಣಕ್ಕೆ ಸಂಬಂಧಿಸಿ ಇಮದು ಶಾಲಾ ಆಡಳಿತ ಮಂಡಳಿಯ ಐವರನ್ನು ಬಂಧಿಸಲಾಗಿದೆ. ಶಾಲೆಯ ಕಾರ್ಯದರ್ಶಿ ಶಾಂತಿ, ಪ್ರಾಂಶುಪಾಲ ಶಿವ ಶಂಕರನ್, ಶಾಲೆಯ ವರದಿಗಾರ ರವಿಕುಮಾರ್, ಇಬ್ಬರು ಶಿಕ್ಷಕರನ್ನು ಬಂಧಿಸಿ 15 ದಿನಗಳ ಕಾಲ ಕಸ್ಟಡಿಗೊಪ್ಪಿಸಲಾಗಿದೆ.
Advertisement