ಉಪ ರಾಷ್ಟ್ರಪತಿ ಹುದ್ದೆಗೆ ಮಾರ್ಗರೇಟ್ ಆಳ್ವ ನಾಮಪತ್ರ: ಗಾಂಧಿ ಕುಟುಂಬದ ನಿಷ್ಠಾವಂತೆಯಾದರೂ ಸೋನಿಯಾ ಜೊತೆಗಿತ್ತು ಭಿನ್ನಾಭಿಪ್ರಾಯ!

14ನೇ ಉಪರಾಷ್ಟ್ರಪತಿ ಹುದ್ದೆಗೆ ಆಕಾಂಕ್ಷಿಯಾಗಿ ಮಾರ್ಗರೆಟ್ ಆಳ್ವಾ ಇಂದು ವಿಪಕ್ಷಗಳ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಮಾರ್ಗರೇಟ್ ಆಳ್ವ ನಾಮಪತ್ರ
ಮಾರ್ಗರೇಟ್ ಆಳ್ವ ನಾಮಪತ್ರ

ನವದೆಹಲಿ: 14ನೇ ಉಪರಾಷ್ಟ್ರಪತಿ ಹುದ್ದೆಗೆ ಆಕಾಂಕ್ಷಿಯಾಗಿ ಮಾರ್ಗರೆಟ್ ಆಳ್ವಾ ಇಂದು ವಿಪಕ್ಷಗಳ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಶಿವಸೇನೆ ನಾಯಕ ಸಂಜಯ್ ರಾವುತ್ ಮತ್ತು ಇತರ ವಿರೋಧ ಪಕ್ಷದ ನಾಯಕರು ಉಪಸ್ಥಿತರಿದ್ದರು.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮಾರ್ಗರೇಟ್ ಆಳ್ವ ಅವರನ್ನು ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯಾಗಿದ್ದು, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಘೋಷಿಸಿದ್ದರು.

ಸೋನಿಯಾ ಗಾಂಧಿಯೊಂದಿಗೆ ಭಿನ್ನಾಭಿಪ್ರಾಯ:
2008 ರಲ್ಲಿ ಮೊದಲ ಬಾರಿಗೆ ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾರ್ಗರೇಟ್ ಆಳ್ವ ಮಧ್ಯೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿತು. ಬಳಿಕ ಕರ್ನಾಟಕದಲ್ಲಿ ಪಕ್ಷದ ನಾಯಕತ್ವವು ಟಿಕೆಟ್ ಮಾರಾಟ ಮಾಡುತ್ತಿದೆ ಎಂದು ಸಾರ್ವಜನಿಕವಾಗಿ ಆಳ್ವ ಆರೋಪಿಸಿದ್ದರು. ವಾಸ್ತವವಾಗಿ ಅವರ ಪುತ್ರ ನಿವೇದಿತ್ ಆಳ್ವಾಗೆ ಟಿಕೆಟ್ ನೀಡಲು ರಾಜ್ಯ ನಾಯಕತ್ವ ನಿರಾಕರಿಸಿತ್ತು.

ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ ಬಳಿಕ ಆಳ್ವಾ ಅವರು, ಸೋನಿಯಾ ಗಾಂಧಿಯನ್ನು ಭೇಟಿಯಾದರು. ನಂತರ ಅವರು ಎಲ್ಲಾ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಆದ್ರೆ, ಸ್ವಲ್ಪ ಸಮಯದ ನಂತರ ಮತ್ತೆ ಪಕ್ಷಕ್ಕೆ ಹಿಂತಿರುಗಿದರು. ಬಳಿಕ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಯಿತು. ಉತ್ತರಾಖಂಡದ ಮೊದಲ ಮಹಿಳಾ ರಾಜ್ಯಪಾಲರಾಗಿದ್ದರು. ಅವರ ಮತ್ತೊಬ್ಬ ಪುತ್ರ ನಿಖಿಲ್ ಆಳ್ವಾ ರಾಹುಲ್ ಗಾಂಧಿಗೆ ಆಪ್ತರಾಗಿದ್ದಾರೆ. ಅವರ ಉಮೇದುವಾರಿಕೆ ದೇಶದ ವೈವಿಧ್ಯತೆಯ ಪ್ರಾತಿನಿಧ್ಯ ಎಂದು ಕಾಂಗ್ರೆಸ್ ಪ್ರಚಾರ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.

ಆಳ್ವಾ ಗಾಂಧಿ ಕುಟುಂಬದ ನಿಷ್ಠಾವಂತೆ:
1942, ಏಪ್ರಿಲ್ 14ರಂದು ಮಂಗಳೂರಿನಲ್ಲಿ ಜನಿಸಿರುವ ಮಾರ್ಗರೇಟ್ ಆಳ್ವಾ ಅವರು, ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಕಾಂಗ್ರೆಸ್ ನಾಯಕರ ಪೀಳಿಗೆಯಿಂದ ಬಂದವರು. 1969 ರಲ್ಲಿ ಅವರು ಇಂದಿರಾ ಗಾಂಧಿಯವರ ನಿಷ್ಠೆಯೊಂದಿಗೆ ರಾಜಕೀಯಕ್ಕೆ ಪ್ರವೇಶಿಸಿದರು. ಗಾಂಧಿ ಕುಟುಂಬಕ್ಕೆ ಅವರ ನಿಷ್ಠೆ ನಾಲ್ಕು ದಶಕಗಳ ಕಾಲ ಮುಂದುವರೆಯಿತು. ಅಲ್ಲದೆ, ಕಾಂಗ್ರೆಸ್ ಪಕ್ಷದಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದವರು. 1974 ರಿಂದ 1998 ರವರೆಗೆ ಪಕ್ಷವು ಅವರನ್ನು ನಿರಂತರವಾಗಿ ರಾಜ್ಯಸಭೆಗೆ ಕಳುಹಿಸಿತು. ಇದರ ನಂತರ ಅವರು 1999 ರಿಂದ 2004 ರವರೆಗೆ ಲೋಕಸಭೆಯ ಸದಸ್ಯರಾಗಿದ್ದರು. ಒಮ್ಮೆ ಕ್ಯಾಬಿನೆಟ್ ಮಂತ್ರಿ ಹುದ್ದೆಯನ್ನೂ ಅಲಂಕರಿಸಿದ್ದರು. ಆದರೆ, 2004ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತರು. ನಂತರ ಆಳ್ವಾ ಅವರನ್ನು ಗೋವಾ, ರಾಜಸ್ಥಾನ, ಗುಜರಾತ್, ಉತ್ತರಾಖಂಡ್ ರಾಜ್ಯಗಳ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com