ಉಪ ರಾಷ್ಟ್ರಪತಿ ಚುನಾವಣೆ: ಜಗದೀಪ್ ಧಂಕರ್ ನಾಮಪತ್ರ ಸಲ್ಲಿಕೆ, ಪ್ರಧಾನಿ ಮೋದಿ ಸೇರಿ ಹಲವು ಗಣ್ಯರ ಉಪಸ್ಥಿತಿ!
ಉಪರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧಂಖರ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Published: 18th July 2022 01:13 PM | Last Updated: 18th July 2022 01:44 PM | A+A A-

ನಾಮಪತ್ರ ಸಲ್ಲಿಸಿದ ಜಗದೀಪ್ ಧಂಕರ್
ನವದೆಹಲಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧಂಖರ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹಾಲಿ ಪಶ್ಟಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಜಗದೀಪ್ ಧಂಖರ್ ಅವರನ್ನು ಈ ಹಿಂದೆ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಉಪ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಸ್ವತಃ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
NDA Vice Presidential candidate Shri Jagdeep Dhankar files nomination. https://t.co/NkW45MBXHK
— BJP (@BJP4India) July 18, 2022
ಇದೀಗ ಜಗದೀಪ್ ಧಂಖರ್ ಅವರು ಉಪ ರಾಷ್ಟ್ರಪತಿ ಚುನಾವಣೆಗೆ ಅಧಿಕೃತವಾಗಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಂಪುಟದ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಸಾಥ್ ನೀಡಿದ್ದರು.
ರಾಜಸ್ಥಾನದಲ್ಲಿ ಬಿಜೆಪಿಯೊಂದಿಗೆ ಸುದೀರ್ಘ ರಾಜಕೀಯ ಇತಿಹಾಸ ಹೊಂದಿದ್ದ ಧಂಕರ್ ರನ್ನು ಈ ಹಿಂದೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕ ಮಾಡಲಾಗಿತ್ತು. ಇದೀಗ ಅವರು ಉಪ ರಾಷ್ಟ್ರಪತಿ ಚುನಾವಣೆಯ ಎನ್ ಡಿಎ ಅಭ್ಯರ್ಥಿಯಾಗಿದ್ದು, ಆಗಸ್ಟ್ 6 ರಂದು ನಡೆಯಲಿರುವ ಚುನಾವಣೆಯಲ್ಲಿ ಅವರು ಪ್ರತಿಪಕ್ಷಗಳು ಕಣಕ್ಕಿಳಿಸಿರುವ ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವಾ ಅವರನ್ನು ಚುನಾವಣೆಯಲ್ಲಿ ಎದುರಿಸಲಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ 2022: ಚುನಾಯಿತ ಸಂಸದರು, ಶಾಸಕರಿಂದ ಮತದಾನ, ಮುರ್ಮು ಗೆಲುವು ಬಹುತೇಕ ನಿಶ್ಚಿತ
ನಿನ್ನೆಯಷ್ಟೇ ಧಂಖರ್ ಅವರು ವಿವಿಧ ಪಕ್ಷಗಳ ಸಂಸದರನ್ನು ಭೇಟಿಯಾಗಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. ಈ ಸಭೆಯಲ್ಲಿ ಬಿಜು ಜನತಾ ದಳ ಮತ್ತು ಮತ್ತು ಲೋಕ ಜನಶಕ್ತಿ ಪಕ್ಷದ ಸಂಸದರಲ್ಲದೆ, ಪ್ರಧಾನಿ ಮೋದಿ ಮತ್ತು ಇತರ ಬಿಜೆಪಿ ಹಿರಿಯ ನಾಯಕರು ಉಪಸ್ಥಿತರಿದ್ದರು.
ಇದನ್ನೂ ಓದಿ: ಉಪ ರಾಷ್ಟ್ರಪತಿ ಚುನಾವಣೆ: ಮಾರ್ಗರೇಟ್ ಆಳ್ವ ವಿಪಕ್ಷ ಅಭ್ಯರ್ಥಿ
ಉಪ ರಾಷ್ಟ್ರಪತಿ ಚುನಾವಣೆಗೆ ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಹಾಲಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ಅವಧಿ ಆಗಸ್ಟ್ 10 ರಂದು ಕೊನೆಗೊಳ್ಳಲಿದೆ.